ಇನ್ಸ್ಟಾಗ್ರಾಂನಲ್ಲಿ ಪರಿಚಯ ಆಗಿ ಪ್ರೀತಿಸಿ ಮದುವೆಯಾದ ಯುವತಿಯ ಬದುಕು ದುರಂತ ಅಂತ್ಯ

Views: 144
ಕನ್ನಡ ಕರಾವಳಿ ಸುದ್ದಿ: ಇನ್ಸ್ಟಾಗ್ರಾಂನಲ್ಲಿ ಪರಿಚಯ ಆಗಿದ್ದ ಯುವಕನನ್ನು ಪ್ರೀತಿ ಮಾಡಿ ಮದುವೆಯಾಗಿದ್ದ ಆ ಯುವತಿಯ ಬದುಕು ದುರಂತವಾಗಿ ಅಂತ್ಯ ಕಂಡಿದೆ.
ಆತ ನಾಗರಾಜ್ ಬೂದಿವಾಳ್, ಆಕೆ ಅನುಪಮಾ. ಇಬ್ಬರಿಗೂ ಇನ್ಸ್ಟಾಗ್ರಾಂನಲ್ಲಿ ಅನುರಾಗ ಅರಳಿತ್ತು. ರಾಯಚೂರು ಜಿಲ್ಲೆ ಸಿಂಧನೂರಿನ ಬೂದಿವಾಳ ಗ್ರಾಮದ ನಾಗರಾಜ್ ಹಾಗೂ ಬೆಂಗಳೂರಿನ ಅನುಪಮಾ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಆದರೆ 9 ತಿಂಗಳ ಗರ್ಭಿಣಿ ಅನುಪಮಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ, ಇನ್ಸ್ಟಾಗ್ರಾಮ್ ಲವ್ ನಂಬಿ ಬಂದಾಕೆಯ ಬದುಕು ದುರಂತವಾಗಿ ಅಂತ್ಯವಾಗಿದೆ.
ಬೆಂಗಳೂರಲ್ಲಿ ಪದವಿ ಓದುವಾಗ ಅನುಪಮಾ-ನಾಗರಾಜ್ ನಡುವೆ ಪ್ರೀತಿ ಮೂಡಿತ್ತು. ಬಳಿಕ ಇಬ್ಬರು ಮನೆ ಬಿಟ್ಟು ಓಡಿ ಹೋಗಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಮಗಳ ಮದುವೆ ವಿಷಯ ತಿಳಿದ ತಂದೆ-ತಾಯಿಗಳು ಪೊಲೀಸರಿಗೆ ದೂರು ನೀಡಿದ್ದರು. ಸಿಂಧನೂರಿನ ಬೂದಿವಾಳದಲ್ಲಿರೋದನ್ನು ಪತ್ತೆ ಹಚ್ಚಿದ್ದ ಅನುಪಮಾ ಪೋಷಕರು ಮಗಳನ್ನು ಕರೆದುಕೊಂಡು ಹೋಗಲು ಬೂದಿವಾಳಕ್ಕೆ ಬಂದಿದ್ದ ವೇಳೆ ಅನುಪಮಾ ವಿರೋಧ ವ್ಯಕ್ತಪಡಿಸಿದ್ದಳು. ನಾನು ನಾಗರಾಜ್ನನ್ನೇ ಇಷ್ಟಪಟ್ಟೇ ಇಲ್ಲಿಗೆ ಬಂದಿದ್ದಾಗಿ ಹೇಳಿಕೆ ನೀಡಿದ್ದಳು. ಇದೇ ಬೇಸರದಲ್ಲಿ ಮಗಳನ್ನು ಅಲ್ಲಿಯೇ ಬಿಟ್ಟು ಪೋಷಕರು ವಾಪಸ್ ಬಂದಿದ್ದರು. ಕೆಲ ದಿನಗಳ ಬಳಿಕ ನನ್ನನ್ನು ಸಾಯಿಸಿ ಬಿಡುತ್ತಾರೆ. ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಿ ಅಂತ ಅನುಪಮಾ ಮೆಸೇಜ್ ಮಾಡಿದ್ದಾಳಂತೆ.
ಮಗಳ ಸಾವಿನ ವಿಷಯ ಪೋಷಕರಿಗೆ ಬರ ಸಿಡಿಲು ಬಡಿದಂತಾಗಿದೆ. ಆಸ್ಪತ್ರೆ ಬಳಿ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು. ಮದುವೆಯಾಗಿ ಎರಡೇ ತಿಂಗಳು ಅಷ್ಟೇ, ಮಗಳಿಗೆ ಕಿರುಕುಳ ಕೊಡಲಾರಂಭಿಸಿದ್ದರು. ವರದಕ್ಷಿಣೆ ಹಣಕ್ಕಾಗಿ ಮಗಳ ಮೊಬೈಲ್ನಿಂದ ಮೆಸೇಜ್ ಮಾಡಿಸ್ತಾ ಇದ್ದರು. ಮಗಳನ್ನು ನೇಣು ಹಾಕಿ ಸಾಯಿಸಿ, ಆಸ್ಪತ್ರೆಗೆ ಸಾಗಿಸಿದ್ದರು. ನಮ್ಮ ಮಗಳ ಸಾವಿಗೆ ನ್ಯಾಯ ಬೇಕು ಅಂತ ಅನುಪಮಾ ತಂದೆ ಬಸವರಾಜ್ ಕಣ್ಣೀರಿಟ್ಟಿದ್ದಾರೆ.
ಸಿಂಧನೂರು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಅನುಪಮಾ ಮೃತದೇಹವನ್ನು ಪೋಷಕರಿಗೆ ನೀಡಲಾಗಿದೆ. ಸಿಂಧನೂರು ಪೊಲೀಸ್ ಠಾಣೆಯಲ್ಲಿ ಕೊಲೆ ಹಾಗೂ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ.