ಯುವಜನ

ಅಪ್ರಾಪ್ತ ವಯಸ್ಕ ಮಗನಿಗೆ ಬೈಕ್ ಕೊಟ್ಟು ಅಪಘಾತ: ತಂದೆಗೆ 27 ಸಾವಿರ ರೂಪಾಯಿ ದಂಡ! 

Views: 139

ಕನ್ನಡ ಕರಾವಳಿ ಸುದ್ದಿ: ಅಪಘಾತದ ಪ್ರಕರಣದಲ್ಲಿ ಅಪ್ರಾಪ್ತ ವಯಸ್ಸಿನ ಮಗನಿಗೆ ಬೈಕ್ ಕೊಟ್ಟಿದ್ದ ತಂದೆಗೆ ರಾಣೆಬೆನ್ನೂರಿನ ಜೆಎಂಎಫ್ಸಿ ನ್ಯಾಯಾಲಯ 27 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.

ಅಪ್ರಾಪ್ತ ಮಗನಿಗೆ ಬೈಕ್ ನೀಡಿದ್ದ ಪ್ರಕರಣದಲ್ಲಿ ಕೋರ್ಟ್ ಆದೇಶದಂತೆ ರಾಣೆಬೆನ್ನೂರು ತಾಲೂಕಿನ ಕಡ್ರಕಟ್ಟಿ ಗ್ರಾಮದ ಡಿಳ್ಳೆಪ್ಪ ಕಾಟಿ ದಂಡ ಕಟ್ಟಿದ್ದಾರೆ.

ಅಪ್ರಾಪ್ತ ಬಾಲಕ ಬೈಕ್ ಚಲಾಯಿಸಿಕೊಂಡು ಹೋಗಿದ್ದ ವೇಳೆ ಅಪಘಾತ ಸಂಭವಿಸಿತ್ತು. ಇದರಿಂದಾಗಿ ಅಪಘಾತದಲ್ಲಿ ಓರ್ವ ವ್ಯಕ್ತಿಗೆ ಗಾಯವಾಗಿತ್ತು. ಈ ಕುರಿತಂತೆ ರಾಣೆಬೆನ್ನೂರು ನಗರ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿತ್ತು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ತಂದೆಗೆ 27 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಅಪ್ರಾಪ್ತ ಮಕ್ಕಳಿಗೆ ಬೈಕ್ ಮತ್ತು ಸ್ಕೂಟರ್ ಕೊಡದಂತೆ ಎಚ್ಚರಿಕೆ ನೀಡಿದ್ದಾರೆ.

ಘಟನೆ ಹಿನ್ನೆಲೆ: ಇದೇ ಜೂನ್ 30 ರಂದು ವ್ಯಕ್ತಿಯೊಬ್ಬರ 17 ವರ್ಷದ ಪುತ್ರ ಬೈಕ್ ಚಲಾಯಿಸಿಕೊಂಡು ಹೋಗುವಾಗ ರಾಣೆಬೆನ್ನೂರಿನ ಹವಾಲ್ದಾರ್ ಹೊಂಡದ ಹತ್ತಿರ ಹಲಗೇರಿ ಕ್ರಾಸ್ನಿಂದ ಮಾರುತಿ ನಗರದ ಕಡೆಗೆ ಹೋಗುವ ರಸ್ತೆಯಲ್ಲಿ ಅಪಘಾತ ಸಂಭವಿಸಿತ್ತು. ಇದರಿಂದಾಗಿ ಜಾಕೀರ್ ಎಂಬಾತನ ತಲೆಗೆ ಮತ್ತು ಕೈಗೆ ಗಾಯವಾಗಿತ್ತು. ಜೊತೆಗೆ ಅಪ್ರಾಪ್ತ ಕೂಡ ಗಾಯಗೊಂಡಿದ್ದ.

ಬಾಲಕ ಅತೀ ವೇಗದಲ್ಲಿ ಬೈಕ್ ಚಲಾಯಿಸುವ ಜೊತೆ ಕುರುಬಗೇರಿ ಕಡೆ ಹೋಗಲು ಯಾವುದೇ ಮುನ್ಸೂಚನೆಯನ್ನೂ ನೀಡದೇ, ಚಾಲನೆ ವೇಳೆ ನಿರ್ಲಕ್ಷ್ಯ ವಹಿಸಿ ಹಲಗೇರಿ ಕ್ರಾಸ್ನಿಂದ ಮಾರುತಿ ನಗರದ ಕಡೆಗೆ ಬೈಕ್ನಲ್ಲಿ ಆಗಮಿಸುತ್ತಿದ್ದ ತಮಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಗಾಯಾಳು ಜಾಕೀರ್ ಸಂಚಾರ ಪೊಲೀಸ್ ಠಾಣೆಯಲ್ಲಿ ಜುಲೈ 1ರಂದು ಪ್ರಕರಣ ದಾಖಲಿಸಿದ್ದರು. ಈ ಕುರಿತು ಪೊಲೀಸರು ಬಾಲಕನ ತಂದೆ ವಿರುದ್ಧ ದೂರು ದಾಖಲಿಸಿಕೊಂಡಿದ್ದರು.

Related Articles

Back to top button
error: Content is protected !!