ಅನ್ನಭಾಗ್ಯ ಯೋಜನೆಯಡಿ ಇನ್ಮುಂದೆ ಸಿಗಲಿದೆ ಈ 7 ಆಹಾರದ ಕಿಟ್‌ಗಳು..!

Views: 256
ಕನ್ನಡ ಕರಾವಳಿ ಸುದ್ದಿ: ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ ಎಂಬಂತೆ ಹೆಚ್ಚುವರಿ 5ಕೆಜಿ ಅಕ್ಕಿ ಬದಲು ಆಹಾರದ ಕಿಟ್ ನೀಡಲು ಸರ್ಕಾರ ಚಿಂತನೆ ನಡೆಸಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮೂಲಗಳ ಪ್ರಕಾರ ಈ ಬಗ್ಗೆ ಪ್ರಸ್ತಾವನೆ ಸಿದ್ಧವಾಗಿದೆ. ಜುಲೈ 2ರಂದು ನಂದಿ ಬೆಟ್ಟದಲ್ಲಿ ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ. ಫಲಾನುಭವಿಗಳಿಗೆ ಹೆಚ್ಚುವರಿ ಅಕ್ಕಿ ಸಿಗುತ್ತಿದ್ದು, ಅದು ಮಾರುಕಟ್ಟೆಗೆ ಹೋಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ಆಹಾರದ ಕಿಟ್ ನಲ್ಲಿ ಸಕ್ಕರೆ, ಉಪ್ಪು, ತೊಗರಿಬೇಳೆ, ಕಾಫಿಪುಡಿ, ಟೀ ಪುಡಿ, ಅಡುಗೆ ಎಣ್ಣೆ, ಗೋಧಿ ಇರಲಿದೆ. ಪ್ರಸ್ತಾವನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದರೆ ಮಾತ್ರ ವಿತರಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ, ಅನ್ನಭಾಗ್ಯ ಯೋಜನೆಯಲ್ಲಿ ಪ್ರತಿ ಪಿ.ಎಚ್.ಹೆಚ್ ಪಡಿತರ ಚೀಟಿದಾರರಿಗೆ ತಿಂಗಳಿಗೆ 10 ಕೆ.ಜಿ ಅಕ್ಕಿ ಸಿಗುತ್ತದೆ. ಕೇಂದ್ರ ಸರ್ಕಾರ 5 ಕೆ.ಜಿ ಅಕ್ಕಿ ನೀಡುತ್ತದೆ. ರಾಜ್ಯ ಸರ್ಕಾರವು 5ಕೆ.ಜಿ ಅಕ್ಕಿ ನೀಡುತ್ತದೆ. ಎರಡೂ ಉಚಿತವಾಗಿ ಸಿಗುತ್ತವೆ. ಇನ್ಮುಂದೆ 2 ಕೆಜಿ ಗೋಧಿ,1 ಕೆಜಿ ತೊಗರಿ ಬೇಳೆ,1 ಲೀಟರ್ ಅಡುಗೆ ಎಣ್ಣೆ,1 ಕೆಜಿ ಸಕ್ಕರೆ,1 ಕೆಜಿ ಉಪ್ಪು,100 ಗ್ರಾಂ ಚಹಾ ಪುಡಿ,50 ಗ್ರಾಂ ಕಾಫಿ ಪುಡಿ ಸಿಗಲಿದೆ.
ಶೀಘ್ರವೇ ಸಂಪುಟ ನಿರ್ಣಯ: ಉಚಿತ ಅಕ್ಕಿ ದುರುಪಯೋಗ ಆಗುತ್ತಿರುವುದನ್ನು ತಡೆಯಲು ಪೌಷ್ಟಿಕಾಂಶಯುಕ್ತ ಆಹಾರ ಕಿಟ್ ವಿತರಿಸುವ ಯೋಜನೆ ಇದಾಗಿದ್ದು, ಜು.2 ರಂದು ನಿಗದಿ ಆಗಿರುವ ಸಂಪುಟ ಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ಹೇಳಿದ್ದಾರೆ.