ಸಾಮಾಜಿಕ

ಅತ್ತೆ,ನಾದಿನಿ ಮಗಳು ಮೂವರನ್ನು ಗುಂಡಿಕ್ಕಿ ಕೊಂದು ತಾನು ಆತ್ಮಹತ್ಯೆ

Views: 157

ಕನ್ನಡ ಕರಾವಳಿ ಸುದ್ದಿ: ಹೆಂಡತಿಯ ಮೇಲಿನ ಸಿಟ್ಟಿಗೆ ವ್ಯಕ್ತಿಯೊಬ್ಬ ತನ್ನ7 ವರ್ಷದ ಮಗಳು, ಅತ್ತೆ, ನಾದಿನಿ ಸೇರಿ ಮೂವರನ್ನು ಗುಂಡಿಕ್ಕಿ ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಚಿಕ್ಕಮಗಳೂರಿನ ಖಾಂಡ್ಯಾ ಸಮೀಪದ ಮಾಗಲು ಗ್ರಾಮದಲ್ಲಿ ನಡೆದಿದೆ.

ರಾತ್ರಿ ಏಕಾಏಕಿ ನುಗ್ಗಿದ ರತ್ನಾಕರ್,ಅತ್ತೆ ಜ್ಯೋತಿ (50), ನಾದಿನಿ ಸಿಂಧು (26) ಹಾಗೂ 7 ವರ್ಷದ ಮಗು ಮೌಲ್ಯಳನ್ನು ಗುಂಡು ಹಾರಿಸಿ ಕೊಲೆ ಮಾಡಿ ಬಳಿಕ ತಾನು ಮನೆಯ ಹಿಂಭಾಗದ ನಿರ್ಜನ ಪ್ರದೇಶದಲ್ಲಿ ಮೂವರನ್ನು ಕೊಂದ  ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಸಿಂಧು ಪತಿ ಅವಿನಾಶ್ ಕಾಲಿಗೂ ಗುಂಡೇಟು ತಗಲಿದ್ದು, ಬಾಳೆಹೊನ್ನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.ಹೊಸತೊಡಕು ಹಬ್ಬದ ರಾತ್ರಿ ನಡೆದ ಮೂವರ ಕೊಲೆ ಮತ್ತು ಒಂದು ಆತ್ಮಹತ್ಯೆ ಸದ್ಯ ಕಾಫಿನಾಡನ್ನು ಬೆಚ್ಚಿಬೀಳಿಸಿದೆ.

ರತ್ನಾಕರ್ ಪತ್ನಿ ತೊರೆದು ಹೋಗಿದ್ದರಿಂದ ಮನನೊಂದು ಈ ದುಷ್ಕೃತ್ಯ ನಡೆಸಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ.

ಶಾಲೆಯಲ್ಲಿ ಸಹಪಾಠಿಗಳು ನಿಮ್ಮ ಅಮ್ಮ ಎಲ್ಲಿ ಎಂದು ಕೇಳುತ್ತಾರೆ ಎಂದು ಅಪ್ಪ ರತ್ನಾಕರ್ ಬಳಿ ಮಗಳು ಅಳಲು ತೋಡಿಕೊಂಡಿದ್ದಳು. ಇದರಿಂದ ಮನನೊಂದಿದ್ದ ರತ್ನಾಕರ್ ನಿನ್ನೆ ರಾತ್ರಿ 10ರ ಪತ್ನಿ ಮನೆಗೆ ತೆರಳಿ, ಅತ್ತೆ, ನಾದಿನಿ ಹಾಗೂ ಮಗಳನ್ನು ನಾಡಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.

ಕಡಬಗೆರೆ ಸಮೀಪದ ಪೂರ್ಣಪ್ರಜ್ಞಾ ಶಾಲೆಯ ಡ್ರೈವರ್ ಆಗಿದ್ದ ರತ್ನಾಕರ್, ಹತ್ಯೆ ಮಾಡುವ ಮುನ್ನ ಸೆಲ್ಫಿ ವಿಡಿಯೋ ಮೂಲಕ ಸಂಸಾರದ ನೋವು ತೋಡಿಕೊಂಡು ಪತ್ನಿ ಬಿಟ್ಟು ಹೋಗಿದ್ದಕ್ಕೆ ಮನನೊಂದು ಈ ಅಮಾನುಷ ಕೃತ್ಯ ಎಸಗಿದ್ದು, ನನ್ನ ಮಗಳ ಖುಷಿ, ಪ್ರೀತಿ, ಸಂತೋಷದ ಮುಂದೆ ಏನೂ ಇಲ್ಲ ಎಂದಿದ್ದಾನೆ.

ಮಗಳಿಗೆ ಶಾಲೆಯಲ್ಲಿ ಮಕ್ಕಳು ನಿಮ್ಮ ಅಮ್ಮ ಎಲ್ಲಿ ಎಂದು ಕೇಳ್ತಾರೆ, ಆಗ ಮಗಳು ನನಗೆ ಕೇಳುತ್ತಾಳೆ. ನನಗೆ ಗೊತ್ತಿಲ್ಲದೆ ಮಗಳು ಆಲ್ಬಂನಿಂದ ಫೋಟೋ ತೆಗೆದುಕೊಂಡು ಹೋಗಿ ಶಾಲೆಯಲ್ಲಿ ತೋರಿಸಿದ್ದಾಳೆ ಎಂದು ವಿವರಿಸಿದ್ದಾರೆ.

ತನ್ನ ನಿರ್ಧಾರವನ್ನ ತನ್ನ ಕುಟುಂಬದವರಿಗೆ ಹೇಳಿದ್ದೇನೆ. ತನ್ನ ಮನೆಯವರು ನನಗೆ ಮೋಸ ಮಾಡಿ ಹೋಗಿ 2 ವರ್ಷ ಆಯ್ತು ಎಂದು ಕೊಲೆ ಮಾಡುವ ಮುನ್ನ ಆರೋಪಿ ರತ್ನಾಕರ್ ಸೆಲ್ಫಿ ವಿಡಿಯೋ ಮಾಡಿದ್ದಾರೆ.

ಕೊಪ್ಪ ಮೂಲದ ರತ್ನಾಕರ್, ಅವರ ಪತ್ನಿಯು ಪತಿ, ಮಗಳನ್ನು ಬಿಟ್ಟು ಎರಡು ವರ್ಷಗಳ ಹಿಂದೆ ಬೆಂಗಳೂರು ಸೇರಿದ್ದರು.

ಮಗಳು ಮೌಲ್ಯಳನ್ನ ರತ್ನಾಕರ್ ತಾನು ಕೆಲಸ ಮಾಡುತ್ತಿದ್ದ ಶಾಲೆಯಲ್ಲಿ ಓದಿಸುತ್ತಿದ್ದ. ನಿನ್ನೆ ಹೊಸತೊಡಕು ಹಬ್ಬವಾಗಿದ್ದರಿಂದ ಅತ್ತೆ ಜ್ಯೋತಿ, ಮೌಲ್ಯಳನ್ನ ಶಾಲೆಯಿಂದ ಮಾಗಲು ಗ್ರಾಮದ ಮನೆಗೆ ಕರೆತಂದಿದ್ದರು. ಬೆಂಗಳೂರಿನಿಂದ ಹೆಂಡತಿ ಹಬ್ಬಕ್ಕೆ ಬಂದಿದ್ದಾಳೆ ಎಂದುಕೊಂಡ ರತ್ನಾಕರ್, ಅತ್ತೆ ಜ್ಯೋತಿ ,ನಾದಿನಿ ಸಿಂಧೂ, ಮಗಳು ಮೌಲ್ಯಳ ಹತ್ಯೆ ಮಾಡಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಅಮಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾಳೆಹೊನ್ನೂರು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Related Articles

Back to top button