ಸಾಲ ತೀರಿಸಲಾಗದೇ, ಹೆತ್ತ ಮಗನನ್ನೇ ಸಾಲ ಕೊಟ್ಟವನ ಬಳಿ ಕೆಲಸಕ್ಕೆ ಬಿಟ್ಟ ದಂಪತಿಗೆ ಶಾಕ್!

Views: 157
ಕನ್ನಡ ಕರಾವಳಿ ಸುದ್ದಿ: ಸಾಲ ತೀರಿಸಲಾಗದೇ, ಅದಕ್ಕೆ ಪ್ರತಿಯಾಗಿ 10 ತಿಂಗಳುಗಳ ಕಾಲ ತಮ್ಮ ಮಗನನ್ನೇ ಸಾಲ ಕೊಟ್ಟವನ ಬಳಿ ಕೆಲಸಕ್ಕೆ ಬಿಟ್ಟಿದ್ದ ದಂಪತಿ ಬಳಿಕ ಆತನನ್ನೂ ಕಳೆದುಕೊಂಡ ದಾರುಣ ಘಟನೆ ವರದಿಯಾಗಿದೆ.
ಜೀತದ ಗುತ್ತಿಗೆ ಅವಧಿ ಮುಗಿದ ಬಳಿಕ ಮಗನನ್ನು ಕರೆತರಲು ಹೋದ ತಂದೆ, ತಾಯಿಗೆ ಶಾಕ್ ಆಗಿದ್ದು, ಇದೀಗ ಹಲವು ತಿಂಗಳ ಹಿಂದೆಯೇ ಹೂಳಲಾಗಿದ್ದ ಬಾಲಕನ ಶವವನ್ನು ಪೊಲೀಸರು ತನಿಖೆಗಾಗಿ ಮತ್ತೆ ಹೊರತೆಗೆದಿದ್ದಾರೆ.
ಈ ಆಘಾತಕಾರಿ ಘಟನೆ ನಡೆದಿರುವುದು ತಮಿಳುನಾಡಿನ ಕಾಂಚಿಪುರಂನಲ್ಲಿ. ಆಂಧ್ರಪ್ರದೇಶದ ಗುಡೂರು ಮೂಲದ ದಂಪತಿಯಾದ ಪ್ರಕಾಶ್ ಎನಾಥಿ ಹಾಗೂ ಅಂಗಮ್ಮಲ ಅವರು ಸತ್ಯವೇಡುವಿನ ಮುತ್ತು ಹಾಗೂ ಧನಪಾಕಿಯಂ ಎಂಬವರ ಬಳಿ 15 ಸಾವಿರ ರೂ. ಸಾಲ ಪಡೆದಿದ್ದರು. ಆದರೆ ಸಾಲ ತೀರಿಸಲು ಪ್ರಕಾಶ್ ದಂಪತಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ, ಸಾಲಗಾರನ ಬಳಿ ಮಾತುಕತೆ ನಡೆಸಿ, ಹಣದ ಬದಲಿಗೆ ತಮ್ಮ ಮಗನನ್ನೇ ಮುತ್ತು ಬಳಿ ಕೆಲಸಕ್ಕೆ ಬಿಡಲು ಒಪ್ಪಿಕೊಂಡಿದ್ದರು.
ಅದರಂತೆ, 9 ವರ್ಷದ ಮಗ ವೆಂಕಟೇಶ್ನನ್ನು 10 ತಿಂಗಳುಗಳ ಕಾಲ ಬಾತುಕೋಳಿಗಳನ್ನು ಮೇಯಿಸುವ ಕೆಲಸಕ್ಕೆ ಕಳುಹಿಸಿಕೊಟ್ಟಿದ್ದರು. ಈ ಸಂದರ್ಭದಲ್ಲಿ ಮುತ್ತು ದಂಪತಿಯು ತಮಿಳುನಾಡಿನ ಕಾಂಚಿಪುರಂಗೆ ಸ್ಥಳಾಂತರಗೊಂಡಿದ್ದರು. ಹೀಗಾಗಿ, ಬಾಲಕ ವೆಂಕಟೇಶ್ ಕೂಡ ಅವರ ಬಳಿಯೇ ಬಾತುಕೋಳಿ ನೋಡಿಕೊಳ್ಳುವ ಕೆಲಸಕ್ಕೆ ಸೇರಿದ್ದ.
ಮಗನ ಕರೆದೊಯ್ಯಲು ಬಂದವರಿಗೆ ಶಾಕ್: ಹೀಗೆ ದಿನ ಕಳೆದಂತೆ, 10 ತಿಂಗಳ ಒಪ್ಪಂದದ ಅವಧಿಯು ಮುಗಿದಿದ್ದು, ಪೋಷಕರು ತಮ್ಮ ಮಗನನ್ನು ಮರಳಿ ಕರೆತರಲು ಮುತ್ತು ಬಳಿ ಹೋಗಿದ್ದಾರೆ. ಆದರೆ, ಹಲವು ತಿಂಗಳ ಬಳಿಕ ಹೆತ್ತಮಗನನ್ನು ನೋಡುವ ಖುಷಿಯಲ್ಲಿದ್ದ ಅವರಿಗೆ ಆಘಾತ ಎದುರಾಗಿದೆ. ಬಾಲಕನನ್ನು ತೋರಿಸದ ಮುತ್ತು ಕುಟುಂಬಸ್ಥರು ಸಾಲದ ತೀರಿಸುವಂತೆ ಪ್ರಕಾಶ್ ದಂಪತಿಗೆ ಮತ್ತೆ ಕೇಳಿದ್ದಾರೆ. ಜೊತೆಗೆ, ಬಾಲಕನ ಬಗ್ಗೆ ಯಾವುದೇ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ. ಇದರಿಂದ, ಆತಂಕಗೊಂಡ ಪೋಷಕರು ಆಂಧ್ರಪ್ರದೇಶದ ಸತ್ಯವೇಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ. ಬಾಲಕ ಅನಾರೋಗ್ಯದಿಂದ ಮೃತಪಟ್ಟಿದ್ದು, ಆತನನ್ನು ಪಾಲರ್ ನದಿ ಬಳಿ ಹೂತಿರುವುದಾಗಿ ಮುತ್ತು, ಆತನ ಪತ್ನಿ ಹಾಗೂ ಮಗ ಪೊಲೀಸರೆದುರು ಬಾಯ್ಬಿಟ್ಟಿದ್ದಾರೆ.
ಪೊಲೀಸ್ ವಿಚಾರಣೆ ವೇಳೆ ಬಯಲಾದ ಘಟನೆ: ಕೆಲಸಕ್ಕೆ ಸೇರಿದ ಸುಮಾರು ಒಂದು ತಿಂಗಳ ಬಳಿಕ ಬಾಲಕನಿಗೆ ಗಂಭೀರ ಆನಾರೋಗ್ಯಕ್ಕೀಡಾಗಿದ್ದ. ಜಾಂಡೀಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆತನನ್ನು ಮುತ್ತು ದಂಪತಿಯು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಬಾಲಕ ಕೊನೆಯುಸಿರೆಳೆದಿದ್ದಾನೆ. ಈ ವಿಚಾರವನ್ನು ಆತನ ಪೋಷಕರಿಗೆ ತಿಳಿಸದ ಮುತ್ತು ಹಾಗೂ ಆತನ ಪತ್ನಿ ತಮ್ಮ ಮಗನೊಂದಿಗೆ ಸೇರಿಕೊಂಡು, ಕಾಂಚಿಪುರಂನ ಪಾಲರ್ ನದಿಯ ಬಳಿ ಅಂತ್ಯಕ್ರಿಯೆ ನಡೆಸಿದ್ದರು ಎಂಬುದು ಪೊಲೀಸ್ ವಿಚಾರಣೆ ಗೊತ್ತಾಗಿದೆ.
ಬಳಿಕ ಬುಧವಾರ (ಮೇ 21) ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಕಾಂಚಿಪುರಂ ಪೊಲೀಸರ ಸಮ್ಮುಖದಲ್ಲಿ ಹಲವು ತಿಂಗಳ ಹಿಂದೆಯೇ ಹೂಳಲಾಗಿದ್ದ ಬಾಲಕ ವೆಂಕಟೇಶ್ ಶವವನ್ನು ಮತ್ತೆ ಮೇಲಕ್ಕೆತ್ತಲಾಗಿದೆ.
ಸದ್ಯ, ಬಾಲಕನ ಸಾವಿಗೆ ನಿಖರ ಕಾರಣವೇನು? ಜಾಂಡೀಸ್ನಿಂದಲೇ ಮೃತಪಟ್ಟಿದ್ದಾನೆಯೇ ಎಂಬುದರ ಕುರಿತು ತನಿಖೆ ಕೈಗೊಂಡಿರುವ ಪೊಲೀಸರು ಖಾಸಗಿ ಆಸ್ಪತ್ರೆಯಲ್ಲಿನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದ್ದಾರೆ. ಕಾಂಚಿಪುರಂ ಪೊಲೀಸರೂ ಸಹ ತನಿಖೆ ನಡೆಸುತ್ತಿದ್ದಾರೆ. 15 ಸಾವಿರ ರೂ. ಸಾಲ ತೀರಿಸಲಾಗದೇ, ಹೆತ್ತ ಮಗನನ್ನೇ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು.