ಸಾಲ ಕೊಡದಿದ್ದಕ್ಕೆ ಬ್ಯಾಂಕ್ ದರೋಡೆ; ಬಾವಿಯಲ್ಲಿ ಅಡಗಿಸಿಟ್ಟಿದ್ದ 17 ಕೆಜಿ ಚಿನ್ನ ವಶಕ್ಕೆ

Views: 89
ಕನ್ನಡ ಕರಾವಳಿ ಸುದ್ದಿ:ಬೇಕರಿ ನಡೆಸಲು ಅಗತ್ಯವಿದ್ದ ಸಾಲವನ್ನು ನೀಡಲು ನಿರಾಕರಿಸಿದ್ದರಿಂದ ಆರೋಪಿಗಳು ನ್ಯಾಮತಿ ಬ್ಯಾಂಕ್ನಲ್ಲಿ ದರೋಡೆ ಮಾಡಿದ್ದಾರೆ.
ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಾವಿಯಲ್ಲಿ ಶೇಖರಿಸಿಟ್ಟಿದ್ದ 13 ಕೋಟಿ ಮೌಲ್ಯದ 17 ಕೆಜಿ ಚಿನ್ನವನ್ನ ವಶಕ್ಕೆ ಪಡೆಯಲಾಗಿದೆ ಪೊಲೀಸರು ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿ ಅ. 28 ರಂದು ಭಾರತೀಯ ಸ್ಟೇಟ್ ಬ್ಯಾಂಕ್ ದರೋಡೆ ಪ್ರಕರಣ ನಡೆದಿತ್ತು. ಆರೋಪಿಗಳ ಸೆರೆಗಾಗಿ ಪೊಲೀಸರು ಐದಾರು ತಂಡ ಕಟ್ಟಿಕೊಂಡು ಕಳ್ಳರ ಬಂಧನಕ್ಕೆ ಅಲೆದಾಡಿದ್ದರೂ ಪ್ರಯೋಜನ ಆಗಿರಲಿಲ್ಲ. ಇದೀಗ ಆರು ತಿಂಗಳ ಬಳಿಕ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ತಮಿಳುನಾಡಿನ ವಿಜಯ ಕುಮಾರ್(30), ಅಜಯ್ ಕುಮಾರ್(28), ಪರಮಾನಂದ (30), ಹೊನ್ನಾಳಿ ಹಾಗೂ ನ್ಯಾಮತಿಯ ಅಭಿಷೇಕ(23) ಚಂದ್ರು (23) ಮಂಜುನಾಥ್ (32) ಬಂಧಿತ ಆರೋಪಿಗಳು.
ಆರೋಪಿಗಳು ಬ್ಯಾಂಕ್ ದರೋಡೆ ಮಾಡಲು ಯೂಟ್ಯೂಬ್‌ನಲ್ಲಿ ಹಾಗೂ ವಿವಿಧ ಓಟಿಟಿ ಆನ್ಲೈನ್ ಫ್ಲಾಟ್ಫಾರ್ಮ್ಗಳಲ್ಲಿ ಬ್ಯಾಂಕ್ ದರೋಡೆ, ಬ್ಯಾಂಕ್ ರಾಬರಿ ಹಾಗೂ ಬ್ಯಾಂಕ್ ಕಳ್ಳತನಕ್ಕೆ ಸಂಬಂಧಿಸಿದಂತೆ ಅನೇಕ ಸರಣಿ ವಿಡಿಯೋಗಳನ್ನು ಸುಮಾರು 6 ತಿಂಗಳು ಕಾಲ ನೋಡಿದ್ದರು. ತಾನು ಒಂದು ಬ್ಯಾಂಕ್ ಕಳ್ಳತನ ಮಾಡಲು ಬೇಕಾಗುವಂತಹ ಎಲ್ಲಾ ಮಾಹಿತಿಗಳನ್ನು ಹಾಗೂ ಕೌಶಲ್ಯಗಳನ್ನು ಪದೇ ಪದೆ ಆ ವಿಡಿಯೋಗಳನ್ನು ನೋಡಿ ಸಂಗ್ರಹಿಸಿ ಬ್ಯಾಂಕ್ ಕಳ್ಳತನ ಹೇಗೆ ಮಾಡಬಹುದೆಂಬ ಬಗ್ಗೆ ಕರಗತ ಮಾಡಿಕೊಂಡಿದ್ದಾಗಿ ಆರೋಪಿಗಳು ತನಿಖೆಯಲ್ಲಿ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಕಳ್ಳತನ ಮಾಡಿದ್ದ ಚಿನ್ನವನ್ನು ವಿಜಯಕುಮಾರ್ ತನ್ನ ಮನೆಯಲ್ಲಿದ್ದಂತಹ ಸಿಲ್ವರ್ ಕಲರ್ ಡಸ್ಟರ್ ಕಾರಿನ ಡಿಕ್ಕಿಯಲ್ಲಿ ಬಚ್ಚಿಟ್ಟಿದ್ದ. ಬಳಿಕ ಆರೋಪಿ ವಿಜಯ್ ಕುಮಾರ್ ಒಂದು ಸಣ್ಣ ಲಾಕರ್‌ಗೆ ಚಿನ್ನವನ್ನು ತುಂಬಿ ತಮಿಳುನಾಡಿನ ಮಧುರೈ ನಿರ್ಜನ ಪ್ರದೇಶದಲ್ಲಿನ ದಟ್ಟ ಅರಣ್ಯದ ಬಾವಿಯಲ್ಲಿ ಬಚ್ಚಿಟ್ಟಿದ್ದರು.