ಶಾರ್ಟ್ ಸರ್ಕ್ಯೂಟ್ ನಿಂದ ತಂದೆ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್…ಮಗನೇ ಕೊಲೆ ಮಾಡಿದ ಸುಳಿವು ನೀಡಿದ ಸಿಸಿಟಿವಿ

Views: 105
ಕನ್ನಡ ಕರಾವಳಿ ಸುದ್ದಿ: ಕುಣಿಗಲ್ ನಲ್ಲಿ ನಡೆದ ಶಾರ್ಟ್ ಸರ್ಕ್ಯೂಟ್ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.ತಂದೆಯನ್ನು ಮಗನೇ ಕೊಂದು, ಬಳಿಕ ಅದನ್ನು ಶಾರ್ಟ್ ಸರ್ಕ್ಯೂಟ್ ಎಂದು ನಾಟಕವಾಡಿದ ಮಗನನ್ನು ಬಂಧಿಸಿದ್ದಾರೆ.
ಮೇ 11 ರಂದು ಕುಣಿಗಲ್ ಪಟ್ಟಣದ ಶಾಮೀರ್ ಆಸ್ಪತ್ರೆ ಮುಂಭಾಗದ ಐಸ್ ಕ್ರಿಂ ತಯಾರಿಕಾ ಘಟಕದಲ್ಲಿ ಮಾಲೀಕ ನಾಗೇಶ್ ಭಾನುವಾರ ಮೃತಪಟ್ಟಿದ್ದರು. ಮೇಲ್ನೋಟಕ್ಕೆ ಇದು ಶಾರ್ಟ್ ಸರ್ಕ್ಯೂಟ್ ಸಾವು ಎನ್ನಲಾಗಿತ್ತು. ಆದರೆ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಸ್ಫೋಟಕ ಮಾಹಿತಿ ಬಹಿರಂಗ ಮಾಡಿದ್ದು, ನಾಗೇಶ್ ಅವರನ್ನು ಮಗನೇ ಕೊಂದಿರುವ ವಿಚಾರ ಬಯಲಿಗೆ ಬಂದಿದೆ.
ಐಸ್ ಕ್ರಿಂ ತಯಾರಿಕಾ ಘಟಕದಲ್ಲಿ ಮಾಲೀಕ ನಾಗೇಶ್ ಮೃತಪಟ್ಟಿದ್ದರಿಂದ, ಸಂಬಂಧಿಕರು ವಿದ್ಯುತ್ ಪ್ರವಹಿಸಿ ಮೃತಪಟ್ಟಿರುವ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದರು. ಪ್ರಕರಣದ ತನಿಖೆ ವೇಳೆ ಘಟನಾ ಸ್ಥಳದಲ್ಲಿ ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದ ಪೊಲೀಸರು, ಕೊನೆಗೂ ಕೊಲೆ ಪ್ರಕರಣವನ್ನು ಬಯಲಿಗೆಳೆದಿದ್ದಾರೆ. ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ ಪೊಲೀಸರಿಗೆ ನಾಗೇಶ್ ಅವರ ಮಗ ಸೂರ್ಯ (19) ಮತ್ತು ಸ್ನೇಹಿತ ಸೇರಿ ಕೊಲೆ ಮಾಡಿರುವ ಸಾಕ್ಷ್ಯ ಲಭ್ಯವಾಗಿವೆ.
ಪೊಲೀಸರು ಸಂಗ್ರಹಿಸಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಘಟನೆ ನಡೆದ ದಿನ ನಾಗೇಶ್(55) ತನ್ನ ಮಗನಿಗೆ ಕಪಾಳಮೋಕ್ಷ ಮಾಡಿದ್ದರು. ಅಲ್ಲದೆ ಚಪ್ಪಲಿ ತೆಗೆದು ಅದರಿಂದ ಮಗ ಸೂರ್ಯನಿಗೆ ಹೊಡೆಯುತ್ತಾರೆ. ನಂತರ ನಾಗೇಶ್ ಸೂರ್ಯನನ್ನು ಹೊಡೆಯಲು ಕೋಲನ್ನು ಎತ್ತಿಕೊಳ್ಳುತ್ತಾರೆ. ಈ ವೇಳೆ ಮಗ ಸೂರ್ಯ, ತನ್ನ ತಂದೆಯನ್ನು ತಡೆಯಲು ಪ್ರಯತ್ನಿಸುತ್ತಾನೆ.
ಬಳಿಕ ಮಗ ಸೂರ್ಯ ಬಿಳಿ ಬಟ್ಟೆಯಿಂದ ತಂದೆಯ ಕುತ್ತಿಗೆಗೆ ಬಿಗಿದು ಕೊಂದು ಹಾಕಿದ್ದಾನೆ. ಈ ವೇಳೆ ಸೂರ್ಯನ ಸ್ನೇಹಿತ ಕೂಡ ಅಲ್ಲಿಯೇ ಇದ್ದು ಬಳಿಕ ನಾಗೇಶ್ ಅವರ ಶವವನ್ನು ಹಾಸಿಗೆ ಮೇಲೆ ಇರಿಸಿ ಅವರ ಬೆರಳುಗಳನ್ನು ಸ್ವಿಚ್ ಬೋರ್ಡ್ ತಾಗಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಕೊಲೆ ಆರೋಪಿ ಮಗ ಸೂರ್ಯನನ್ನು ಬಂಧಿಸಿದ್ದು, ಆತನಿಗೆ ನೆರವು ನೀಡಿದ ಸ್ನೇಹಿತ ಪರಾರಿಯಾಗಿದ್ದಾನೆ.