ರಾಜ್ಯದಲ್ಲಿ 3 ಮಂಗನ ಕಾಯಿಲೆ ಪ್ರಕರಣ ಪತ್ತೆ, ಶಿವಮೊಗ್ಗದಲ್ಲಿ ಸೋಂಕು ದೃಢಪಟ್ಟ ಯುವತಿ ಮೊದಲ ಬಲಿ

Views: 33
ಶಿವಮೊಗ್ಗ: ಹೊಸನಗರ ತಾಲೂಕಿನ ಅರಮನೆಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಯುವತಿಯೊಬ್ಬರು ಮಂಗನ ಕಾಯಿಲೆ (ಕೆಎಫ್ಡಿ) ಸೋಂಕಿನಿಂದ ಸಾವನ್ನಪ್ಪಿದ್ದಾರೆ. 2024ರ ಅವಧಿಯಲ್ಲಿ ಇದು ಜಿಲ್ಲೆಯಲ್ಲಿ ಕೆಎಫ್ಡಿ ಸೋಂಕಿಗೆ ಮೊದಲ ಬಲಿಯಾಗಿದೆ.
18 ವರ್ಷದ ಯುವತಿಗೆ ತೀವ್ರ ಜ್ವರ ಕಾಣಿಸಿಕೊಂಡಿದ್ದು ಇಂದು ಮಣಿಪಾಲ್ನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಯುವತಿಗೆ ಕಳೆದ ಕೆಲ ದಿನದಿಂದ ಜ್ವರ ಹೆಚ್ಚಾಗಿದ್ದರಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಪರೀಕ್ಷೆ ಮಾಡಿಸಿದಾಗ ಮಂಗನ ಕಾಯಿಲೆ ನೆಗಟಿವ್ ಎಂದು ಬಂದಿತ್ತು. 2ನೇ ಬಾರಿ ಆರ್ಟಿಪಿಸಿಆರ್ ಟೆಸ್ಟ್ ಮಾಡಿದಾಗ ಕೆಎಫ್ಡಿ ಪಾಸಿಟಿವ್ ಎಂದು ಬಂದಿದೆ. ಹೀಗಾಗಿ 3 ದಿನ ಮೆಗ್ಗಾನ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಯುವತಿ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಮಣಿಪಾಲ್ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಸಾವನ್ನಪ್ಪಿದ್ದಾರೆ. ಇದು ಜಿಲ್ಲೆಯಲ್ಲಿ ಕೆಎಫ್ಡಿಗೆ ಬಲಿಯಾಗಿರುವುದು ಮೊದಲ ಪ್ರಕರಣವಾಗಿದೆ. ಕೆಎಫ್ಡಿ ಶಿವಮೊಗ್ಗ ಜಿಲ್ಲೆಯಲ್ಲಿ 2 ಕೇಸ್ ಸೇರಿದಂತೆ ರಾಜ್ಯದಲ್ಲಿ ಈವರೆಗೆ 3 ಪ್ರಕರಣ ಪತ್ತೆಯಾಗಿವೆ. ಕಳೆದ ಡಿಸೆಂಬರ್ನಲ್ಲಿ ಪ್ರಸಕ್ತ ಸಾಲಿನ ಮೊದಲ ಕೇಸ್ ತೀರ್ಥಹಳ್ಳಿಯಲ್ಲಿ ಪತ್ತೆಯಾಗಿತ್ತು.