ಭಾರತ ಮೂಲದ ಯೂಟ್ಯೂಬರ್ ಮಹಿಳೆ ಭೀಕರ ಹತ್ಯೆ
Views: 35
ಕನ್ನಡ ಕರಾವಳಿ ಸುದ್ದಿ: ಕೆನಡಾದಲ್ಲಿ ನೆಲೆಸಿರುವ ಭಾರತೀಯರ ಮೇಲೆ ಅದರಲ್ಲೂ ವಿಶೇಷವಾಗಿ ಖಲಿಸ್ತಾನಿ ಪ್ರತ್ಯೇಕತಾವಾದವನ್ನು ವಿರೋಧಿಸುವವರ ಮೇಲಿನ ದಾಳಿಗಳು ಮುಂದುವರಿದಿದೆ. ಇದೀಗ ಪಂಜಾಬಿ ಮೂಲದ 45 ವರ್ಷದ ಮಹಿಳೆಯೊಬ್ಬರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಮೃತ ಮಹಿಳೆಯನ್ನು ಕೆನಡಾದ ವಿಂಡ್ಸರ್ ನಿವಾಸಿ ಹಾಗೂ ಜನಪ್ರಿಯ ಯೂಟ್ಯೂಬರ್ ನ್ಯಾನ್ಸಿ ಗ್ರೆವಾಲ್ ಎಂದು ಗುರುತಿಸಲಾಗಿದೆ.
ಮಾರ್ಚ್ 3ರ ರಾತ್ರಿ 9:30ರ ಸುಮಾರಿಗೆ ಒಂಟಾರಿಯೊ ಪ್ರಾಂತ್ಯದ ಲಾಸ್ಸಾಲ್ ಪ್ರದೇಶದ ಟಾಡ್ ಲೇನ್‌ನಲ್ಲಿ ಈ ಘಟನೆ ನಡೆದಿದೆ. ಮಹಿಳೆಗೆ ಚಾಕುವಿನಿಂದ ಇರಿಯಲಾಗಿದೆ ಎಂಬ ಮಾಹಿತಿ ಸಿಕ್ಕ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಲಾಸ್ಸಾಲ್ ಪೊಲೀಸರು ಹಾಗೂ ವೈದ್ಯಕೀಯ ಸಿಬ್ಬಂದಿ (EMS), ರಕ್ತದ ಮಡುವಿನಲ್ಲಿ ಬಿದ್ದಿದ್ದ ನ್ಯಾನ್ಸಿ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ತೀವ್ರ ರಕ್ತಸ್ರಾವದಿಂದಾಗಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ ಕೆನಡಾ ಸ್ಟ್ರೀಟ್ ಮತ್ತು ಬಿಷಪ್ ಸ್ಟ್ರೀಟ್ ನಡುವಿನ ಎರಡು ಮನೆಗಳ ಸುತ್ತಲೂ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ತನಿಖೆ ಮುಂದುವರಿಸಿದ್ದಾರೆ. ಮನೆಗಳ ಮುಂಭಾಗದ ಮೆಟ್ಟಿಲುಗಳು ಹಾಗೂ ಕಾಂಕ್ರೀಟ್ ಹಾದಿಯಲ್ಲಿರುವ ರಕ್ತದ ಕಲೆಗಳು ಮತ್ತು ಪ್ರಮುಖ ಸಾಕ್ಷ್ಯಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ.
ಲಾಸ್ಸಾಲ್ ಪೊಲೀಸ್ ಇಲಾಖೆಯು ತನ್ನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ನ್ಯಾನ್ಸಿ ಗ್ರೆವಾಲ್ ಅವರ ಕುಟುಂಬಕ್ಕೆ ನಮ್ಮ ತೀವ್ರ ಸಂತಾಪಗಳು. ಇದೊಂದು ಪ್ರತ್ಯೇಕ ಪ್ರಕರಣ ಎಂದು ನಮ್ಮ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ, ವಿಶೇಷವಾಗಿ ಯೂಟ್ಯೂಬ್‌ನಲ್ಲಿ ಸದಾ ಸಕ್ರಿಯರಾಗಿದ್ದ ನ್ಯಾನ್ಸಿ ಗ್ರೆವಾಲ್, ಪಂಜಾಬ್‌ನ ರಾಜಕೀಯ ಮತ್ತು ಸಾಮಾಜಿಕ ವಿದ್ಯಮಾನಗಳ ಬಗ್ಗೆ ತಮ್ಮ ದಿಟ್ಟ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು. ವಿಶೇಷವೆಂದರೆ, ಇವರು ಕೆನಡಾದಲ್ಲಿದ್ದುಕೊಂಡೇ ಖಲಿಸ್ತಾನಿ ಬೆಂಬಲಿಗರನ್ನು ಮತ್ತು ಪ್ರತ್ಯೇಕತಾವಾದಿಗಳನ್ನು ತೀವ್ರವಾಗಿ ಖಂಡಿಸುತ್ತಿದ್ದರು. ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ಕುರಿತಾಗಿಯೂ ಅವರು ನಿರ್ಭಯವಾಗಿ ವಿಡಿಯೋಗಳನ್ನು ಮಾಡಿದ್ದರು.






