ಆಟೋ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಯಡ್ತಾಡಿ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು
Views: 58
ಕನ್ನಡ ಕರಾವಳಿ ಸುದ್ದಿ: ರಸ್ತೆ ಬದಿಯಲ್ಲಿ ನಿಂತಿದ್ದ ಪಾದಚಾರಿಗೆ ಅತೀ ವೇಗವಾಗಿ ಬಂದ ಆಟೋ ರಿಕ್ಷಾವೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರನ್ನು ಯಡ್ತಾಡಿ ನಿವಾಸಿ ಸಂಜೀವ ಪೂಜಾರಿ ಎಂದು ಗುರುತಿಸಲಾಗಿದೆ.
ಇವರು ಕಳೆದ ಫೆಬ್ರವರಿ 22 ರಂದು ಮಧ್ಯಾಹ್ನ ಸುಮಾರು 2:00 ಗಂಟೆಗೆ ತಮ್ಮ ಮಗ ಪ್ರವೀಣ ಪೂಜಾರಿ (36) ಅವರೊಂದಿಗೆ ಕಾಜ್ರಳ್ಳಿ ದೇವಸ್ಥಾನಕ್ಕೆ ಭೇಟಿ ನೀಡಿ ವಾಪಸ್ಸು ಮನೆಗೆ ಬರುತ್ತಿದ್ದರು.
ಈ ಸಂದರ್ಭದಲ್ಲಿ ಶಿರಿಯಾರ ಗ್ರಾಮದ ಸಾಹೇಬ್ರಕಟ್ಟೆ ಶನೀಶ್ವೇರ ದೇವಸ್ಥಾನದ ಬಳಿ ರಸ್ತೆ ದಾಟಲು ರಸ್ತೆ ಬದಿಯಲ್ಲಿ ನಿಂತಿದ್ದರು.
ಅದೇ ಸಮಯದಲ್ಲಿ ಕಾಜ್ರಹಳ್ಳಿಯಿಂದ ಸಾಹೇಬ್ರಕಟ್ಟೆ ಕಡೆಗೆ ಚಲಿಸುತ್ತಿದ್ದ KA.20.AC.6504 ಸಂಖ್ಯೆಯ ಆಟೋ ರಿಕ್ಷಾವನ್ನು ಅದರ ಚಾಲಕ ಸಂದೀಪ್ ಎಂಬುವವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದಾರೆ. ಈ ಸಂದರ್ಭ ನಿಯಂತ್ರಣ ತಪ್ಪಿದ ಆಟೋ ರಸ್ತೆಯ ತೀರಾ ಎಡ ಅಂಚಿಗೆ ಬಂದು, ಅಲ್ಲಿ ನಿಂತಿದ್ದ ಸಂಜೀವ ಪೂಜಾರಿಯವರಿಗೆ ಜೋರಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಸಂಜೀವ ಪೂಜಾರಿಯವರು ರಸ್ತೆಗೆ ಬಿದ್ದು ತಲೆಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದವು. ತಕ್ಷಣವೇ ಅವರನ್ನು ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಫೆಬ್ರವರಿ 27 ರಂದು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಸುಮಾರು 11 ದಿನಗಳ ಕಾಲ ಸಾವಿನೊಂದಿಗೆ ಹೋರಾಡಿದ ಸಂಜೀವ ಪೂಜಾರಿಯವರು ಮಾರ್ಚ್ 05 ರಂದು ಮುಂಜಾನೆ 3:27 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಮೃತರ ಮಗ ಪ್ರವೀಣ ಪೂಜಾರಿ ನೀಡಿದ ದೂರಿನ ಮೇರೆಗೆ ಕೋಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಟೋ ಚಾಲಕ ಸಂದೀಪ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.






