ಮದುವೆಗೆ ಮೊದಲೇ ನವವಧು ಆತ್ಮಹತ್ಯೆ! ವರದಕ್ಷಿಣೆಯಾಗಿ ವರ ಕೇಳಿದ್ದೇನು?

Views: 210
ಕನ್ನಡ ಕರಾವಳಿ ಸುದ್ದಿ: ಮದುವೆಗೆ ಮುನ್ನ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ರಾಜಸ್ಥಾನದ ಧೌಲ್ಪುರ ಜಿಲ್ಲೆಯ ಸರಾನಿಖೇಡ ಗ್ರಾಮದಲ್ಲಿ ನಡೆದಿದೆ.
ವರದಕ್ಷಿಣೆಯಾಗಿ 180 ಸಿಸಿ ಪಲ್ಸರ್ ಬೈಕ್ ಕೊಡಬೇಕೆಂದು ವರ ಕೇಳಿದ್ದ ಎನ್ನಲಾಗಿದೆ. ಬೈಕ್ ಕೊಡದಿದ್ದರೆ ಮದುವೆಯಾಗುವುದಿಲ್ಲ ಎಂದು ವರ ಹಠ ಹಿಡಿದಿದ್ದ. ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ರಘುವೀರ್ ಸಿಂಗ್ ಜಾಟವ್ ಅವರ 20 ವರ್ಷದ ಮಗಳು ರೂಬಿಗೆ ಧೌಲ್ಪುರ ಜಿಲ್ಲೆಯ ಪಿಪೆಹರ ಗ್ರಾಮದ ನಿವಾಸಿ ರವಿ ಜೊತೆ ನಿಶ್ಚಿತಾರ್ಥವಾಗಿತ್ತು. ಮಾರ್ಚ್ 1 ರಂದು ಇವರಿಬ್ಬರ ಮದುವೆ ನಿಗದಿಯಾಗಿತ್ತು. ಕುಟುಂಬಸ್ಥರು ಸಂಭ್ರಮದಿಂದ ಮದುವೆಯ ತಯಾರಿ ನಡೆಸುತ್ತಿದ್ದರು. ಗುರುವಾರ ರೂಬಿ ಕುಟುಂಬಸ್ಥರು ಮದುವೆ ಸಾಮಗ್ರಿ ಖರೀದಿಸಲು ಮಾರುಕಟ್ಟೆಗೆ ಹೋಗಿದ್ದರು. ಈ ವೇಳೆ ರವಿ, ರೂಬಿ ತಂದೆಯಿಂದ 180 ಸಿಸಿ ಪಲ್ಸರ್ ಬೈಕ್ ಕೇಳಿದ್ದ. ರೂಬಿ ತಂದೆ ಮಾರುಕಟ್ಟೆಯಲ್ಲಿ ಬೈಕ್ ಬಗ್ಗೆ ವಿಚಾರಿಸಿದಾಗ ಆ ಬೈಕ್ ಮಾರುಕಟ್ಟೆಯಲ್ಲಿ ಲಭ್ಯವಿರಲಿಲ್ಲ. ಬೈಕ್ ಸಿಗದಿದ್ದರೆ ಮದುವೆಯಾಗುವುದಿಲ್ಲ ಎಂದು ರವಿ ಹಠ ಹಿಡಿದ. ಕುಟುಂಬಸ್ಥರು ಮಾರುಕಟ್ಟೆಯಿಂದ ವಾಪಸ್ ಬಂದಾಗ ರೂಬಿ ನೇಣು ಬಿಗಿದುಕೊಂಡಿರುವುದನ್ನು ಕಂಡು ದಿಗ್ಭ್ರಮೆಗೊಂಡರು.
ಘಟನೆಯ ಮಾಹಿತಿ ತಿಳಿದ ಪಚಗಾಂವ್ ಚೌಕಿ ಉಸ್ತುವಾರಿ ಅರುಣ್ ಶರ್ಮಾ ತಮ್ಮ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಶುಕ್ರವಾರ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪೊಲೀಸರು ರವಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವರದಕ್ಷಿಣೆ ಕಿರುಕುಳ, ಆತ್ಮಹತ್ಯೆ ಪ್ರಕರಣ ಗಂಭೀರ ಪ್ರಕರಣವಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.