ಭಾರತ vs ಪಾಕ್ | ಮಧ್ಯಮ ಕ್ರಮಾಂಕದ ಕುಸಿತ; ಭಾರತಕ್ಕೆ 192 ರನ್ ಗುರಿ ನೀಡಿದ ಪಾಕ್

Views: 0
ಅಹಮದಾಬಾದ್: ಸಂಘಟಿತ ಪ್ರದರ್ಶನ ನೀಡಿದ ಭಾರತದ ಬೌಲರ್‌ಗಳು, ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನದ ಬ್ಯಾಟರ್‌ಗಳನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದೆ.
ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 42.5 ಓವರ್‌ಗಳಲ್ಲಿ 191 ರನ್ ಗಳಿಸಿ ಸರ್ವಪತನ ಕಂಡಿದೆ.
ಮೊಹಮ್ಮದ್ ಸಿರಾಜ್, ಜಸ್‌ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್ ಹಾಗೂ ರವಿಂದ್ರ ಜಡೇಜ ತಲಾ ಎರಡು ವಿಕೆಟ್‌ಗಳನ್ನು ಹಂಚಿಕೊಂಡರು.
ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನಕ್ಕೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಉತ್ತಮ ಆರಂಭ ಒದಗಿಸಿದರು. ಅಬ್ದುಲ್ಲಾ ಶಫೀಕ್ (30) ಹಾಗೂ ಇಮಾಮ್ ಉಲ್ ಹಕ್ (36) ಜೋಡಿ ಮೊದಲ ವಿಕೆಟ್ 41 ರನ್ ಸೇರಿಸಿದರು.
ಇವರಿಬ್ಬರ ವಿಕೆಟ್ ಪತನದ ಬಳಿಕ ಜೊತೆಯಾದ ನಾಯಕ ಬಾಬರ್ ಅಜಂ (50) ಮತ್ತು ರಿಜ್ವಾನ್ ಮೊಹಮ್ಮದ್ (49) ಜೋಡಿ ಮೂರನೇ ವಿಕೆಟ್ ಪಾಲುದಾರಿಕೆಯಲ್ಲಿ 82 ರನ್ ಕೂಡಿಸಿತು. ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಈ ಇಬ್ಬರು, ಪಾಕ್ ತಂಡದ ಮೊತ್ತವನ್ನು ಮುನ್ನೂರರ ಸನಿಹಕ್ಕೆ ಕೊಂಡೊಯ್ಯುವ ಸೂಚನೆ ನೀಡಿದರು.
ಆದರೆ, ಭಾರತದ ಬೌಲರ್‌ಗಳು ಅದಕ್ಕೆ ಅವಕಾಶ ನೀಡಲಿಲ್ಲ. ಬಾಬರ್ ಹಾಗೂ ರಿಜ್ವಾನ್ ಜೋಡಿಯನ್ನು ವೇಗಿ ಸಿರಾಜ್ ಬೇರ್ಪಡಿಸಿದರು.
ಅರ್ಧಶತಕ ಗಳಿಸಿ ಭರವಸೆ ಮುಡಿಸಿದ್ದ ಬಾಬರ್, ಕ್ಲೀನ್ ಬೌಲ್ಡ್ ಆಗುವುದರೊಂದಿಗೆ ಪಾಕ್ ಪಡೆಯ ಕ್ರಮಾಂಕವೂ ಶುರುವಾಯಿತು. ರಿಜ್ವಾನ್ 49 ರನ್ ಗಳಿಸಿದ್ದಾಗ ಔಟಾದರು. ನಂತರ ಯಾವೊಬ್ಬ ಬ್ಯಾಟರ್ ಸಹ ಸಮರ್ಥ ಆಟವಾಡಲಿಲ್ಲ. ಇದು ಪಾಕ್ ಪಡೆಗೆ ಮುಳುವಾಯಿತು.