ಪರೀಕ್ಷೆ ಭಯಕ್ಕೆ ನಾಪತ್ತೆಯಾದ ವಿದ್ಯಾರ್ಥಿನಿಯರು, 75 ದಿನಗಳು ಕಳೆದರೂ ಸುಳಿವಿಲ್ಲ
Views: 17
ಕನ್ನಡ ಕರಾವಳಿ ಸುದ್ದಿ: ಬೆಂಗಳೂರು ನಗರದ ವಿದ್ಯಾರಣ್ಯಪುರದಲ್ಲಿ ಸೆಕೆಂಡ್ ಪಿಯುಸಿ ಓದುತ್ತಿದ್ದ ತನಿಷ್ಕಾ ಮತ್ತು ಆಕೆಯ ಜ್ಯೂನಿಯರ್ ತೇಜಸ್ವಿನಿ ಎಂಬ ಇಬ್ಬರು ವಿದ್ಯಾರ್ಥಿನಿಯರು ಪರೀಕ್ಷಾ ಭಯದಿಂದ ಜನವರಿ 31, 2026ರಂದು ಮನೆ ಬಿಟ್ಟು ಹೋದ ನಂತರ ಬರೋಬ್ಬರಿ 75 ದಿನಗಳು ಕಳೆದಿದ್ದರೂ ಅವರ ಬಗ್ಗೆ ಯಾವುದೇ ಸುಳಿವು ಸಿಗದೆ ಇರುವುದು ಪೊಲೀಸ್ ಮತ್ತು ಕುಟುಂಬಸ್ಥರನ್ನು ತೀವ್ರವಾಗಿ ಕಂಗಾಲುಗೊಳಿಸಿದೆ.
ಪೊಲೀಸರು 10 ಜನರ ವಿಶೇಷ ತಂಡವನ್ನು ರಚಿಸಿ ಮುಂಬೈ, ಚೆನ್ನೈ, ಕೊಯಮತ್ತೂರು, ದೆಹಲಿ, ಕಾಶಿ, ಕೇರಳ, ಚಾಮರಾಜನಗರ, ಮೈಸೂರು, ಮಲೆಮಹದೇಶ್ವರ ಬೆಟ್ಟ ಸೇರಿದಂತೆ 100ಕ್ಕೂ ಹೆಚ್ಚು ನಗರಗಳು ಮತ್ತು ಸ್ಥಳಗಳಲ್ಲಿ ತೀವ್ರ ಹುಡುಕಾಟ ನಡೆಸಿದ್ದಾರೆ. ಆದರೆ ಇದುವರೆಗೂ ಯಾವುದೇ ಸುಳಿವು ಲಭ್ಯವಾಗಿಲ್ಲ.
ಇಬ್ಬರೂ ಫೋನ್ ಬಳಸುತ್ತಿಲ್ಲ, ಎಟಿಎಂ ಕಾರ್ಡ್ ಬಳಕೆ ಇಲ್ಲ, ಕುಟುಂಬ ಮತ್ತು ಸ್ನೇಹಿತರ ಜೊತೆ ಯಾವುದೇ ಸಂಪರ್ಕವಿಲ್ಲ. ಮನೆಯಿಂದ ಹೊರಡುವಾಗ ಕೇವಲ 3,000 ರೂಪಾಯಿ ಮಾತ್ರ ತೆಗೆದುಕೊಂಡು ಹೋಗಿದ್ದರು. ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದವರೆಗೂ ಹೋಗಿದ್ದ ಸುಳಿವು ಸಿಕ್ಕಿತ್ತು, ಆದರೆ ಅಲ್ಲಿಂದ ಮುಂದೆ ಎಲ್ಲಿ ಹೋದರು ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಪೊಲೀಸರು ಇವರ ಎಲ್ಲಾ ಇಷ್ಟದ ಸ್ಥಳಗಳಲ್ಲಿ ತಲಾಶ್ ನಡೆಸಿದ್ದಾರೆ. ಇವರು ಉಚಿತ ಬಸ್ ಸೌಲಭ್ಯ ಬಳಸಿ ಪ್ರಯಾಣಿಸಿರುವ ಸಾಧ್ಯತೆಯೂ ಇದೆ. ಯುಡಿಆರ್ ಆರ್ ಕೇಸ್ ಕೂಡ ದಾಖಲಾಗಿಲ್ಲ.
ಪೋಷಕರು ತೀವ್ರ ಆತಂಕದಲ್ಲಿದ್ದು, ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಪೊಲೀಸರಿಗೆ ಒಂದು ವಾರದ ಸಮಯ ನೀಡಿತ್ತು, ಆದರೆ ಈಗ ಒಂದು ತಿಂಗಳು ಕಳೆದರೂ ಸುಳಿವು ಸಿಗದೆ ಇರುವುದು ಕುಟುಂಬವನ್ನು ತುಂಬಾ ಕಂಗಾಲುಗೊಳಿಸಿದೆ.
ಪೊಲೀಸರು ತನಿಖೆ ಮುಂದುವರಿಸಿದ್ದು, ಯಾವುದೇ ಸುಳಿವು ಸಿಕ್ಕ ತಕ್ಷಣ ಮಾಹಿತಿ ನೀಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.






