ಕೆಲಸಕ್ಕೆಂದು ತೆರಳಿದ್ದ ಅಪ್ರಾಪ್ತೆ 2 ತಿಂಗಳ ಬಳಿಕ ಪತ್ತೆ; ಪುಸಲಾಯಿಸಿ ಕರೆದೊಯ್ದು ಯುವಕ ಸೆರೆ
Views: 100
ಕನ್ನಡ ಕರಾವಳಿ ಸುದ್ದಿ: ಕೆಲಸಕ್ಕೆಂದು ಮಂಗಳೂರಿಗೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಅಪ್ರಾಪ್ತ ಬಾಲಕಿ ಸುಮಾರು ಎರಡೂವರೆ ತಿಂಗಳ ಬಳಿಕ ಪತ್ತೆಯಾಗಿದ್ದಾಳೆ. ಆಕೆಯನ್ನು ಪುಸಲಾಯಿಸಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಕಡಬದ ಯುವಕನನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.
ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯೊಬ್ಬರ ಅಪ್ರಾಪ್ತ ವಯಸ್ಸಿನ ಪುತ್ರಿ ಮೇ 7, 2026ರಂದು ಮಂಗಳೂರಿಗೆ ಕೆಲಸಕ್ಕೆ ಹೋಗುತ್ತಿರುವುದಾಗಿ ಮನೆಯಿಂದ ತೆರಳಿದ್ದಳು. ಆದರೆ ಬಳಿಕ ಮನೆಗೆ ಹಿಂದಿರುಗದೆ ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಕುಟುಂಬದವರು ಹುಡುಕಾಟ ನಡೆಸಿದ್ದು, ಪತ್ತೆಯಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಮೇ 11ರಂದು ಸುಳ್ಯ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 137(2)ರ ಅಡಿಯಲ್ಲಿ ಕಾಣೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಮುಂದುವರಿಸಿದ್ದ ಪೊಲೀಸರು ಜುಲೈ 22ರಂದು ಕಾಣೆಯಾಗಿದ್ದ ಬಾಲಕಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.
ವಿಚಾರಣೆ ವೇಳೆ, ಕಡಬ ನಿವಾಸಿಯಾದ ಧನುಷ್(18) ಎಂಬಾತ ತನಗೆ ಸುಳ್ಳು ಭರವಸೆ ನೀಡಿ ಪುಸಲಾಯಿಸಿ ಕರೆದುಕೊಂಡು ಹೋಗಿದ್ದು, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬಾಲಕಿ ಹೇಳಿಕೆ ನೀಡಿದ್ದಾಳೆ.
ಆರೋಪಿ ಧನುಷ್‌ನನ್ನು ಜುಲೈ 22ರಂದು ಬಂಧಿಸಿರುವ ಪೊಲೀಸರು ನ್ಯಾಯಾಂಗ ಕ್ರಮ ಕೈಗೊಂಡಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
ಅಪ್ರಾಪ್ತ ಮಕ್ಕಳ ವಿರುದ್ಧದ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದ್ದು, ಇಂತಹ ಪ್ರಕರಣಗಳಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.






