ಇತರೆ

ಕುಂದಾಪುರ: ವಂಡ್ಸೆಯಲ್ಲಿ ರಸ್ತೆ ದಾಟಲು ಮುಂದಾದ ಮಹಿಳೆಗೆ ಕಾರು ಡಿಕ್ಕಿ ಸ್ಥಳದಲ್ಲೇ ಸಾವು 

Views: 317

ಕನ್ನಡ ಕರಾವಳಿ ಸುದ್ದಿ:ರಸ್ತೆ ದಾಟಲು ಮುಂದಾದ ಮಹಿಳೆಯೊಬ್ಬರಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ, ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ  ಕುಂದಾಪುರ ಸಮೀಪದ ವಂಡ್ಸೆಯಲ್ಲಿ ನಡೆದಿದೆ.

ವಂಡ್ಸೆಯಲ್ಲಿ ಹಿಟ್ಟಿನ ಗಿರಣಿ ನಡೆಸುತ್ತಾ ಜೀವನ ಸಾಗಿಸುತ್ತಿದ್ದ ಶಶಿಕಲಾ ಮೊಗವೀರ (50) ಮೃತಪಟ್ಟ ದುರ್ದೈವಿ ಎಂದು ತಿಳಿಯಲಾಗಿದೆ.

ಮಂಗಳವಾರ ಸಂಜೆ ಸುಮಾರು 7 ಗಂಟೆಯ ಹೊತ್ತಿಗೆ ವಂಡ್ಸೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರಿರುವ ದಿನಸಿ ಅಂಗಡಿಗೆ ಸಾಮಾನು ಖರೀದಿಸಲು ಶಶಿಕಲಾ ಅವರು ಬಂದಿದ್ದರು.

ಖರೀದಿಯ ಬಳಿಕ ರಸ್ತೆಯ ಇನ್ನೊಂದು ಬದಿಯಲ್ಲಿ ತಮ್ಮ ಸಂಬಂಧಿಕರೊಬ್ಬರು ನಿಂತಿರುವುದನ್ನು ಕಂಡ ಅವರು, ಅತ್ತ ತೆರಳಲು ತಕ್ಷಣವೇ ರಸ್ತೆ ದಾಟಲು ಮುಂದಾಗಿದ್ದಾರೆ. ಇದೇ ವೇಳೆ ಚಿತ್ತೂರು ಕಡೆಯಿಂದ ವಂಡ್ಸೆ ಮಾರ್ಗವಾಗಿ ಅತಿ ವೇಗದಲ್ಲಿ ಬಂದ ಕಾರು ಇವರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಶಶಿಕಲಾ ಅವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಅಪಘಾತ ಎಸಗಿದ ಕಾರನ್ನು ಮಾರಣಕಟ್ಟೆ ಸಮೀಪದ ನಿವಾಸಿ ಸುಖೇಶ್ ಶೆಟ್ಟಿ ಎಂಬುವವರು ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ.

ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮೃತರು ಪತಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಕೊಲ್ಲೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

Related Articles

Back to top button
error: Content is protected !!