ಮಂಗಳೂರು:ಬಲವಂತ ಲಿಂಗ ಪರಿವರ್ತನೆ ಆರೋಪ: ಮಂಗಳಮುಖಿ ಸಂಘಟನೆ ಗರಂ
Views: 100
ಕನ್ನಡ ಕರಾವಳಿ ಸುದ್ದಿ:ಟ್ರಾನ್ಸ್‌ಜೆಂಡರ್ ಗುರುತಿನ ಪ್ರಮಾಣಪತ್ರ ಹಾಗೂ ಲಿಂಗ ಪರಿವರ್ತನೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಗಂಭೀರ ವಿವಾದವೊಂದು ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಒಬ್ಬ ಯುವಕನ ಮೇಲೆ ಬಲವಂತವಾಗಿ ಲಿಂಗ ಪರಿವರ್ತನೆ ಮಾಡಿಸಲಾಗಿದೆ ಹಾಗೂ ದಾಖಲೆಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡುತ್ತಿವೆ. ಈ ಹಿನ್ನೆಲೆಯಲ್ಲಿ ಮಂಗಳಮುಖಿ ಸಮುದಾಯದ ಸಂಘಟನೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಆರೋಪ ಹೊತ್ತಿರುವ ಅನಿಮಂಗಳೂರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನಿಂದ ಆರಂಭವಾಗಿ ಮಂಗಳೂರಿನವರೆಗೆ ವ್ಯಾಪಿಸಿರುವ ಈ ಪ್ರಕರಣದಲ್ಲಿ, ಟ್ರಾನ್ಸ್‌ಜೆಂಡರ್ ಗುರುತಿನ ದಾಖಲೆಗಳು, ಆಧಾರ್ ಕಾರ್ಡ್, ವೋಟರ್ ಐಡಿ ಹಾಗೂ TG Cardಗಳ ಬಳಕೆ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿರುವ ಮಾಹಿತಿಯ ಪ್ರಕಾರ, ಒಬ್ಬ ಯುವಕನನ್ನು ಟ್ರಾನ್ಸ್‌ಜೆಂಡರ್ ಗುರುತಿನ ಪ್ರಕ್ರಿಯೆಗೆ ಒಳಪಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಆರೋಪಗಳ ನಡುವೆ ಕಿಡ್ನ್ಯಾಪ್ ಹಾಗೂ ಒತ್ತಡದ ಮೂಲಕ ಲಿಂಗ ಪರಿವರ್ತನೆ ಯತ್ನ ನಡೆದಿದೆ ಎಂಬ ಹೇಳಿಕೆಗಳೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿವೆ.
ಮಂಗಳಮುಖಿ ಸಮುದಾಯ ಸಂಘಟನೆ ಈ ಆರೋಪಗಳನ್ನು ತೀವ್ರವಾಗಿ ತಳ್ಳಿಹಾಕಿದೆ. ಸಂಘಟನೆಯ ಪ್ರತಿನಿಧಿಯೊಬ್ಬರು ಮಾತನಾಡಿ, ‘ಯುವಕನನ್ನು ಕಿಡ್ನ್ಯಾಪ್ ಮಾಡಿ ಲಿಂಗ ಪರಿವರ್ತನೆ ಮಾಡಲಾಗುತ್ತಿದೆ ಎಂಬ ಆರೋಪದಿಂದ ನಮ್ಮ ಸಮುದಾಯದ ಬಗ್ಗೆ ಜನರ ಭಾವನೆ ಬದಲಾಗಿದೆ’ ಎಂದು ತಿಳಿಸಿದ್ದಾರೆ. ಅವರು ಮುಂದುವರೆದು, ‘ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ಎಲ್ಲ ಮಾಹಿತಿಗಳು ನಿಜವಲ್ಲ ಮತ್ತು ನಿಜಾಂಶವನ್ನು ಕಾನೂನು ತನಿಖೆಯಿಂದಲೇ ನಿರ್ಧರಿಸಬೇಕು’ ಎಂದು ಹೇಳಿದ್ದಾರೆ.
ಆರೋಪ ಎದುರಿಸುತ್ತಿರುವ ಅನಿಮಂಗಳೂರು ಸ್ಪಷ್ಟನೆ ನೀಡಿ, ‘ತಮ್ಮ ವಿರುದ್ಧ ಮಾಡಲಾಗುತ್ತಿರುವ ಆರೋಪಗಳು ಸಂಪೂರ್ಣ ಸುಳ್ಳು’ ಎಂದು ಹೇಳಿದ್ದಾರೆ. ‘ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ಆ ಯುವಕನೇ ನನ್ನನ್ನು ಸಂಪರ್ಕಿಸಿ ನಾನು ಮಂಗಳಮುಖಿ ಎಂದು ಬಂದು ನನ್ನ ಮನೆಯಲ್ಲಿ ವಾಸವಿದ್ದ. ನನ್ನ ಆಧಾರ್ ಕಾರ್ಡ್ ಬಳಸಿ ಆತ ಮಂಗಳೂರಿನ ವಿಳಾಸವನ್ನು ತನ್ನ ಆಧಾರ್ ಕಾರ್ಡ್ನಲ್ಲಿ ಬಳಸಿದ್ದ. ಟ್ರಾನ್ಸ್ಜೆಂಡರ್ ಎಂದು ಸರ್ಟಿಫಿಕೇಟ್ ಪಡೆದುಕೊಂಡಿದ್ದ. ಆ ಬಳಿಕ ಆತ ನನ್ನಲ್ಲಿ ತಾನು ಗಂಡು, ನನಗೆ ನೀವು 3 ಲಕ್ಷ ಹಣ ಕೊಡಬೇಕೆಂದು ಕೇಳಿದ್ದ. ಈ ಹಿನ್ನೆಲೆಯಲ್ಲಿ ಆತನ ಟಿಜಿ ಕಾರ್ಡ್ ದುರುಪಯೋಗ ಬಗ್ಗೆ ಕಂಕನಾಡಿ ಠಾಣೆಯಲ್ಲಿ ದೂರು ನೀಡಿದ್ದೆ. ಆದರೆ ಆ ಬಳಿಕ ಈತ ನನ್ನ ಮೇಲೆ ಆರೋಪ ಮಾಡಿದ್ದಾನೆ’ ಎಂದು ತಿಳಿಸಿದ್ದಾರೆ.
.






