ಬೋರ್ ವೆಲ್ ಮರುಪೂರಣ ಭರಪೂರ ಜಲಧಾರೆ

Views: 16
ಗುಡ್ಡ ಪ್ರದೇಶದಲ್ಲಿ ದೇಶಿಯ ಕೃಷಿ, ಹೈನುಗಾರಿಕೆಯಿಂದ ಫಲಕಂಡ ಮಾದರಿ
ಕೃಷಿಕರು ಶ್ರೀ ಅಶೋಕ ಶೆಟ್ಟಿಗಾರ ಮತ್ತು ಶ್ರೀಮತಿ ಜ್ಯೋತಿ ಲಕ್ಷ್ಮೀ ದಂಪತಿ
ವಕ್ವಾಡಿ: ಹುಬ್ಬಳ್ಳಿಯಲ್ಲಿ ಉದ್ಯಮಿಯಾಗಿರುವ ಶ್ರೀ ಅಶೋಕ ಶೆಟ್ಟಿಗಾರ ಮತ್ತು ಶ್ರೀಮತಿ ಜ್ಯೋತಿ ಲಕ್ಷ್ಮೀ ಕುಟುಂಬದವರು ಶುದ್ಧ ಪರಿಸರದ ವಾತಾವರಣ ಮತ್ತು ಉತ್ತಮ ಆರೋಗ್ಯಕ್ಕಾಗಿ ನಗರವನ್ನು ತೊರೆದು ಕುಂದಾಪುರ ತಾಲೂಕು ಕುಂಭಾಶಿ ಆನೆಗುಡ್ಡೆ ವಿನಾಯಕ ದೇವಸ್ಥಾನದ ಬಲಬಾಗದ ಹಿಂಬಾಗದಲ್ಲಿರುವ ವಕ್ವಾಡಿ ರಸ್ತೆಯ ಪಕ್ಕದಲ್ಲಿ 2 ಎಕರೆ ವಿಸ್ತೀರ್ಣದ ಗುಡ್ಡ ಪ್ರದೇಶದಲ್ಲಿ ವಾಸ್ತವ್ಯ ಮಾಡಿಕೊಂಡಿರುವ ಇವರ ಇಬ್ಬರು ಮಕ್ಕಳಲ್ಲಿ ಗೌತಮ ಬಿಸಿಎ ಪದವಿ ಓದುತ್ತಿದ್ದು, ಇನ್ನೊಬ್ಬ ಪುತ್ರ ಅನುಪ ಉತ್ತಮ ಜೀವನ ಸಂಸ್ಕಾರಕ್ಕಾಗಿ ಗೋಕರ್ಣ ಗುರುಕುಲ ಪದ್ಧತಿಯ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾನೆ. ಇವರು ಮನೆಯಂಗಳದಲ್ಲಿ 60 ಅಡಿ ಬಾವಿ ತೋಡಿಸಿ ನೀರಿನ ಅಭಾವ ಕಂಡಿದ್ದರು ಬಾವಿಯ ಪಕ್ಕದಲ್ಲಿ 630 ಅಡಿ ಆಳದ ಬೋರ್ ವೆಲ್ ತೋಡಿಸಿದ್ದರು ನಂತರ ಅದರ ಸುತ್ತ ಮರುಪೂರಣದಿಂದ ಮಳೆಗಾಲದ ಪೂರ್ವದಲ್ಲಿ 25 ಅಡಿ ನೀರಿನ ಆಶ್ರಯ ಪಡೆದು ಗುಡ್ಡ ಪ್ರದೇಶದ ಕಡುಬಿಸಿಲಿನ ನಡುಬವೆಯೂ ತಂಪು ನೀಡುವ ಕೃಷಿ ಮತ್ತು ಹಸಿರಿನ ತೋಟ ಮನಸೆಳೆಯುತ್ತದೆ. ಇವರ ಮನೆಯ ಸುತ್ತಮುತ್ತಲಿನ ಪರಿಸರದವರು ಸಹ ಉತ್ತಮ ನೀರಿನ ಆಶ್ರಯ ಪಡೆದಿದ್ದಾರೆ.
ಬೋರ್ ವೆಲ್ ಮರುಪೂರಣ ಹೇಗೆ.?
ಮನೆ ಅಂಗಳದ ಬಾವಿಯಲ್ಲಿ 60 ಅಡಿ ಬಾವಿಯಲ್ಲಿ ನೀರಿನ ಅಭಾವ ಕಂಡ ಅವರು 10 ವರ್ಷದ ಹಿಂದೆ ಬಾವಿಯ 30 ಅಡಿ ದೂರದಲ್ಲಿ 630 ಅಡಿ ಬೋರ್ ವೆಲ್ ತೋಡಿಸಿದ್ದರು. 7 ವರ್ಷದ ಹಿಂದೆ ಭೂ ತಜ್ಞ ದೇವರಾಜ ರೆಡ್ಡಿ ಅವರ ಪರಿಚಯವಾಗಿ ಬೋರ್ ವೆಲ್ ಮರುಪೂರಣದಿಂದ ಭರಪೂರ ನೀರು ಪಡೆಯ ಬಹುದೆಂಬ ಸಲಹೆಯಿಂದ ಬೋರ್ ವೆಲ್ ಪೈಪ್ ನ ಸುತ್ತ 12 ಅಡಿ ಆಗಲ ಮತ್ತು ಆಳದ ಗುಂಡಿ ತೋಡಿ ಪೈಪ್ ಸುತ್ತ 3 ಪದರದ ಜಾಲರಿ ಸುತ್ತಿ ಕ್ರಮವಾಗಿ ದೊಡ್ಡ ಸಣ್ಣ ಬೋಡ್ರಸ್,ಜಿಲ್ಲಿ ಕಲ್ಲು, ಮತ್ತು ಜಾಲರಿಯ ತೆಳುಹಾಳೆ ಹಾಸಿ ನಂತರ ಗೊಜ್ಜು ಕಲ್ಲು ಹಾಕಿ ಹೊಂಡ ತುಂಬಿಸಲಾಗುತ್ತದೆ. ಅದರ ಪಕ್ಕದಲ್ಲಿ ಅಷ್ಟೇ ಆಗಲದ ಗುಂಡಿ ನಿರ್ಮಿಸಿ, ಮನೆಯ ಮಾಡು, ಮನೆಯಂಗಳ, ತೋಟ ಎಲ್ಲಾ ದಿಕ್ಕಿನ ನೀರು ಬೋರ್ ವೆಲ್ ಗುಂಡಿಗೆ ಹಾಯುವಂತೆ ಮಾಡಿದ್ದಾರೆ. ಮರುಪೂರಣದ ನಂತರ ನೀರಿಲ್ಲದ ಬಾವಿಯಲ್ಲಿ ದಿನೇ ದಿನ ನೀರಿನ ಮಟ್ಟ ಏರುತ್ತಿದ್ದು, ಬೇಸಿಗೆಯ ಕೊನೆಯಲ್ಲಿ 25 ಅಡಿ ನೀರು ನಿಂತಿದೆ. ಬೋರ್ ವೆಲ್ ನಲ್ಲಿಯೂ ನೀರು ತುಂಬಿ ತುಳುಕುತ್ತಿದೆ. ಭರಪೂರ ಜಲಧಾರೆಯಿಂದ ಭರ್ಜರಿ ಯಶಸ್ಸು ಕಂಡ ಭೂತಜ್ಞ ದೇವರಾಜ ರೆಡ್ಡಿಯವರಿಗೂ ರಾಷ್ಟ್ರ ಪಶಸ್ತಿ ಬಂತು. ಇವರ ಮನೆಯ ಅಕ್ಕ ಪಕ್ಕದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಾವಿ ಮತ್ತು ಬೋರ್ ವೆಲ್ ತೋಡಿಸಿ ನೀರಿನ ಅಭಾವ ಕಂಡವರು ಸಹ ಉತ್ತಮ ನೀರಿನ ಆಶ್ರಯ ಪಡೆದಿದ್ದಾರೆ. ನಾಡಿನಾದ್ಯಂತ ಪ್ರಚಾರ ಪಡೆದುಕೊಂಡಿದ್ದ ಮರುಪೂರಣದ ಯಶಸ್ಸು ಕಂಡ ಅಶೋಕ ಶೆಟ್ಟಿಗಾರರ ಸಲಹೆಯನ್ನು ಪಡೆಯಲು ಜನರು ಈಗಲೂ ಬರುತ್ತಿದ್ದಾರೆ.
ಸಾವಯವ ಕೃಷಿ, ದೇಶಿ ಹೈನುಗಾರುಕೆ ಬಗ್ಗೆ ಒಲವು:
ರಾಸಾಯನಿಕ ಹೊರತಾದ ಆಹಾರ ಸೇವನೆ ಮತ್ತು ಆಹಾರ ಕಾಳಜಿಯತ್ತ ಹೆಚ್ಚಿನ ಒಲವು ತೋರಿದ್ದರಿಂದ ದೇಶಿಯ ದನಗಳನ್ನು ಸಾಕಿ ತಾವೆ ಮಾರುಕಟ್ಟೆಯನ್ನು ಮಾಡಿ ಉತ್ತಮ ದರಕ್ಕೆ ಹಾಲು ಮತ್ತು ಗೋಉತ್ವನ್ನಗಳನ್ನು ಮಾರಾಟ ಮಾಡುತ್ತಾರೆ. ಮಳೆಗಾಲದ ಭತ್ತದ ಬೇಸಾಯ ಮತ್ತು ತೋಟ,ತರಕಾರಿಗಳಿಗೆ ಕೊಟ್ಟಿಗೆಯಲ್ಲಿ ಸಂಗ್ರಹವಾದ ಸಗಣಿ ಮೇವಿನ ತ್ಯಾಜ್ಯವನ್ನು ಬಳಸುತ್ತಾರೆ. ಶೆಟ್ಟಿಗಾರರ ಪತ್ನಿ ಜ್ಯೋತಿ ಲಕ್ಷಿö್ಮ ಅವರು ಸಾವಯವ ಕೃಷಿ ಮತ್ತು ದೇಶಿಯ ಹೈನುಗಾರಿಕೆ ಬಗ್ಗೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ತಮ್ಮ ಅನುಭವಗಳನ್ನು ಮಾಹಿತಿ ನೀಡುತ್ತಾರೆ. ಇವರಿಗೆ ಅಧ್ಯಾತ್ಮಿಕೆಯ ಬಗ್ಗೆ ಹೆಚ್ಚಿನ ಒಲವು ಇರುವುದರಿಂದ ಬ್ರಾಹ್ಮೀ ಮಹೂರ್ತದಲ್ಲಿ ಎದ್ದು ದೇಹ ಮತ್ತು ಮನಸ್ಸಿನ ಶುದ್ಧೀಕರಣಕ್ಕಾಗಿ ಯೋಗ, ಪ್ರಾಣಾಯಾಮ, ಜಪ-ತಪ ಅನುಷ್ಠಾನ ಮತ್ತು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡು ಉತ್ತಮ ಆರೋಗ್ಯ, ಸರಳ ಸಂತೃಪ್ತ ಜೀವನ ನಡೆಸುತ್ತಿರುವ ಈ ಕುಟುಂಬದವರು ಎಲ್ಲರಿಗೂ ಮಾದರಿಯಾಗಿದ್ದಾರೆ.
ವಿಳಾಸ: ಅಶೋಕ ಶೆಟ್ಟಿಗಾರ ಗಣೇಶ್ ನಗರ ಬಡಾವಣೆ, ಕುಂಭಾಶಿ. ವಕ್ವಾಡಿ ರಸ್ತೆ ಕುಂದಾಪುರ ತಾಲೂಕು ಉಡುಪಿ ಜಿಲ್ಲೆಸಂಪರ್ಕ:9035137899
ಹೀಗೆನ್ನುತ್ತಾರೆ…….. ಗುಡ್ಡ ಪ್ರದೇಶದಲ್ಲಿ ನೀರಿನಾಶ್ರಯಕ್ಕಾಗಿ ಬೋರ್ ವೆಲ್ ಮರುಪೂರಣದಿಂದ ಯಶಸ್ಸು ಕಂಡ ಅಶೋಕ್ ಶೆಟ್ಟಿಗಾರ ಇವರ ಸಾಧನೆ ಮೆಚ್ಚುವಂತಹದ್ದು, ಹೆಚ್ಚಿನವರು ಇದರ ಬಗ್ಗೆ ಮಾಹಿತಿ ತೆಗೆದುಕೊಳ್ಳುತಾರೆ ಮಳೆಗಾಲ ಬಂದು ಹೇರಳವಾಗಿ ನೀರು ಸಿಕ್ಕಾಗ ಬೋರ್ ವೆಲ್ ಮರುಪೂರಣ, ಇಂಗುಗುಂಡಿ ಕಡೆಗೆ ಗಮನ ಹರಿಸದೇ ಮತ್ತೆ ಅವರಿಗೆ ನೆನಪಾಗುವುದು ನೀರಿಲ್ಲದ ಬೇಸಿಗೆಯಲ್ಲಿ ಮಾತ್ರ –ರವೀಂದ್ರ ಶೆಟ್ಟಿಗಾರ ಹೂವಿನಕೆರೆ.
ಚಿತ್ರ ಬರಹ: ಸುಧಾಕರ ವಕ್ವಾಡಿ