ಬೀದಿನಾಯಿ ದಾಳಿ: ಮಹಿಳೆಯ ಸಾವಿಗೆ ಹೆದ್ದಾರಿ ತಡೆದು ಪ್ರತಿಭಟನೆ

Views: 75
ಕನ್ನಡ ಕರಾವಳಿ ಸುದ್ದಿ: ಬೀದಿ ನಾಯಿಗಳ ದಾಳಿಗೆ ಪಟ್ಟಣದ ಚೋಳಿನವರ ಬಡಾವಣೆ ಮಹಿಳೆ ಮೃತಪಟ್ಟ ಹಿನ್ನಲೆಯಲ್ಲಿ ಆಕ್ರೋಶಗೊಂಡ ಮೃತರ ಸಂಬಂಧಿಕರು, ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ನಡೆದಿದೆ.
ಬೀದಿ ನಾಯಿಗಳ ದಾಳಿಗೆ ಮೃತಪಟ್ಟ ಮಹಿಳೆಯನ್ನು ಪಟ್ಟಣದ ಚೋಳಿನವರ ಬಡಾವಣೆ ನಿವಾಸಿ ಪ್ರೇಮಾ ಶರಣಪ್ಪ ಚೋಳಿನ(52) ಎಂದು ಗುರುತಿಸಲಾಗಿದೆ.
ಬೆಳಿಗ್ಗೆ ಹೂವು ತರಲು ತೆರಳಿದ್ದ ಪ್ರೇಮಾ ಚೋಳಿನ ಅವರ ಮೇಲೆ ಏಕಾಏಕಿ ಬೀದಿ ನಾಯಿಗಳ ದಾಳಿಯಿಂದ ಕೈ, ಕಾಲುಗಳು ಗಾಯಗೊಂಡಿದ್ದು, ನಾಯಿಗಳ ದಾಳಿಯಿಂದ ಭಯಗೊಂಡ ಮಹಿಳೆ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ವೇಳೆ ಆಯ ತಪ್ಪಿ ಚರಂಡಿಯಲ್ಲಿ ಬಿದ್ದಿದ್ದಾರೆ. ಆಗ ಮಹಿಳೆಯನ್ನು ಇಲ್ಲಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದಾರೆ. ಮಹಿಳೆಗೆ ವೈದ್ಯರು ಚಿಕಿತ್ಸೆ ನೀಡಲು ಮುಂದಾದ ಕೆಲ ಕ್ಷಣಗಳ ಬಳಿಕ ಚಿಕಿತ್ಸೆಗೆ ಗಾಯಾಳು ಸ್ಪಂದಿಸದ್ದರಿಂದ ಮಹಿಳೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಮೃತಳ ಸಂಬಂಧಿಕರು ಹಾಗೂ ಬಡಾವಣೆಯ ನಿವಾಸಿಗಳು ಪುರಸಭೆ ವಿರುದ್ಧ ಧಿಕ್ಕಾರ ಕೂಗಿ, ಮಹಿಳೆಯ ಸಾವಿಗೆ ನ್ಯಾಯಕ್ಕೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆಗೆ ನಡೆಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿ, ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಅನೇಕ ಬಾರಿ ಪುರಸಭೆ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಪರಿಣಾಮ ಬೀದಿ ನಾಯಿಗಳ ಹಾವಳಿಯಿಂದ ಅನೇಕರು ಗಾಯಗೊಂಡರೆ, ಇಂದು ಅಮಾಯಕ ಮಹಿಳೆ ಸಾವನ್ನಪ್ಪಿದ್ದಾಳೆ. ಹೀಗಾಗಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ಬೀದಿನಾಯಿ, ಬೀದಿ ದನಗಳಿಗೆ ಕಡಿವಾಣ ಹಾಕಲು ಆಡಳಿತ ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.