ಧಾರ್ಮಿಕ
ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ಹೋಗುತ್ತಿದ್ದವರ ಮೇಲೆ ಬಸ್ ಹರಿದು ಇಬ್ಬರು ಸಾವು

Views: 157
ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳಕ್ಕೆ ಪಾದಯಾತ್ರೆ ಹೋಗುತ್ತಿದ್ದವರ ಮೇಲೆ ಖಾಸಗಿ ಬಸ್ ಹರಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಾಸನ ತಾಲೂಕಿನ ಕೆಂಚಟ್ಟಹಳ್ಳಿ ಬಳಿ ನಡೆದಿದೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಆನಗೋಳು ಗ್ರಾಮದ ಸುರೇಶ್ (60), ಕುಮಾರ್ (55) ಮೃತ ದುರ್ದೈವಿಗಳು.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ದಿನೇಶ್ ಎಂಬುವರನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ಹೋಗುತ್ತಿದ್ದರು. ದಾರಿ ಮಧ್ಯೆ ಖಾಸಗಿ ಬಸ್ ಪಾದಯಾತ್ರಿಗಳ ಮೇಲೆ ಹರಿದಿದೆ. ಶಾಂತಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಆತಂಕಗೊಂಡ ಬಸ್ ಚಾಲಕ ಬಸ್ಸನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಇದೀಗ ಬೆಂಗಳೂರು, ಮೈಸೂರು, ಮಂಡ್ಯ ಮುಂತಾದ ಕಡೆಗಳಿಂದ ಧರ್ಮಸ್ಥಳದತ್ತ ಪಾದಯಾತ್ರಿಗಳು ತೆರಳುವ ಸಮಯವಾಗಿದೆ. ಈ ಮಾರ್ಗದಲ್ಲಿ ಎಚ್ಚರದಿಂದ ನಡೆಯುವಂತೆ ಹಾಗೂ ವಾಹನ ಚಲಾಯಿಸುವಂತೆ ಪೊಲೀಸರು ಎಚ್ಚರಿಸಿದ್ದಾರೆ.