ಕೋಟೇಶ್ವರ ಯಕ್ಷಗಾನ ವೇದಿಕೆಯಲ್ಲಿ ಸಾಧಕ ವಿಷ್ಣುಮೂರ್ತಿ ಪುರಾಣಿಕರಿಗೆ ಸನ್ಮಾನ

Views: 161
ಕುಂದಾಪುರ :ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದವರಿಂದ ಜ.17ರಂದು ಕೋಟೇಶ್ವರ ಕುದುರೆಕೆರೆ ಬೆಟ್ಟು ‘ನವಗ್ರಹ ವಾಸ್ತು ಶಾಸ್ತ್ರಾಲಯ ಸಂಕಲ್ಪ ಮ್ಯೂಸಿಯಂ’ ಎದುರುಗಡೆ ಮೈದಾನದಲ್ಲಿ ಶ್ರೀಮತಿ ಕಾವ್ಯಶ್ರೀ ಮತ್ತು ವಾಸ್ತು ತಜ್ಞ ಡಾ.ಬಸವರಾಜ್ ಶೆಟ್ಟಿಗಾರ್ ಇವರ ಹರಕೆ ಬಯಲಾಟದಲ್ಲಿ ಕೋಟೇಶ್ವರ ಕೋದಂಡರಾಮ ದೇವಾಲಯದ ಮಾಜಿ ಆಡಳಿತ ಧರ್ಮದರ್ಶಿ, ಪ್ರಗತಿಪರ ಕೃಷಿಕ ಹಾಗೂ ಸಾಧಕರಾದ ವಿಷ್ಣುಮೂರ್ತಿ ಪುರಾಣಿಕರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.
ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ಸನ್ಮಾನಿಸಿದರು.
ನಂತರ ಅವರು ಮಾತನಾಡಿ, ‘ಸಮರ್ಪಣಾ ಮನೋಭಾವದಿಂದ ಸತ್ಕಾರ್ಯದಲ್ಲಿ ತೊಡಗಿಸಿಕೊಂಡು ತನ್ನ ಏಳಿಗೆಯೊಂದಿಗೆ ಎಲ್ಲರ ಏಳಿಗೆ ಸಾಧಿಸಿದಾಗ ತನ್ನ ವ್ಯಕ್ತಿತ್ವದ ಬೆಳವಣಿಗೆಯ ಜೊತೆಯಲ್ಲಿ ಸಮಾಜ ಬೆಳೆಯಲು ಸಾಧ್ಯ’ ಈ ನಿಟ್ಟಿನಲ್ಲಿ ಈ ಪುಣ್ಯ ಕಾರ್ಯದಲ್ಲಿ ಸೇವೆಯಲ್ಲಿ ಸಾರ್ಥಕ ಮೆರೆದ ಪುರಾಣಿಕರನ್ನು ಅಭಿನಂದಿಸಿ, ಕೃತಘ್ನರಾಗೋಣ ಎಂದರು.
ಸಭೆಯಲ್ಲಿ ಸಾಲಿಕೇರಿ ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮೊಕ್ತೇಸರ ಸುರೇಶ್ ಶೆಟ್ಟಿಗಾರ್, ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ ಅಧ್ಯಕ್ಷ ರಾಮದಾಸ್ ಶೆಟ್ಟಿಗಾರ್ ಪಣೆಯಾಡಿ, ರೋಟರಿ ಕ್ಲಬ್ ಅಧ್ಯಕ್ಷ ಜಗದೀಶ್, ಚಂದ್ರಶೇಖರ್, ಭಾಸ್ಕರ್ ಸ್ವಾಮಿ, ಮೇಳದ ಮ್ಯಾನೇಜರ್ ಗಿರೀಶ್, ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸೇವಾ ಸಂಘದ ಅಧ್ಯಕ್ಷ ಜನಾರ್ದನ ಶೆಟ್ಟಿಗಾರ ಇದ್ದರು.
ಗುರುರಾಜ್ ಶೆಟ್ಟಿಗಾರ್ ಸ್ವಾಗತಿಸಿದರು, ವಾಸ್ತು ತಜ್ಞ ಬಸವರಾಜ್ ಶೆಟ್ಟಿಗಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಲೊಕೇಶ್ ಶೆಟ್ಟಿಗಾರ್ ಧನ್ಯವಾದ ಅರ್ಪಿಸಿದರು.
ಈ ಸಂದರ್ಭದಲ್ಲಿ “ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ” ಪ್ರಸಂಗದ ಪ್ರದರ್ಶನ ನಡೆಯಿತು.
ಯಕ್ಷಗಾನ ಪ್ರದರ್ಶನದ ನಂತರ ರಾತ್ರಿ 12:30 ಕ್ಕೆ ತೆಂಕುತಿಟ್ಟಿನ ಪ್ರಸಿದ್ಧ ಹಿಮ್ಮೆಳನ ಮತ್ತು ಮುಮ್ಮೆಳನ ಕಲಾವಿದರಿಂದ “ಚಕ್ರವರ್ತಿ ವಿಕ್ರಮಾದಿತ್ಯ” ತಾಳಮದ್ದಳೆ ಕಾರ್ಯಕ್ರಮ ನಡೆಯಿತು.