ಕೊಲ್ಲೂರು ದೇವಸ್ಥಾನದ ಹತ್ತಿರ ಹೆದ್ದಾರಿ ನಿರ್ಮಾಣ: ಹೈಕೋರ್ಟ್ ಹೇಳಿದ್ದೇನು?

Views: 103
ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಪಕ್ಕದಲ್ಲೇ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಗೊಳ್ಳುತ್ತಿರುವುದು ಭಕ್ತರಲ್ಲಿ ಆತಂಕ ಮೂಡಿಸಿದೆ.
ಅದರ ಬೆನ್ನಲ್ಲೇ ಭೂ ಸ್ವಾಧೀನ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಸೂಚಿಸಿ ಮಧ್ಯಂತರ ಆದೇಶ ಮಾಡಿದೆ. ಹಾಗಾಗಿ ಸದ್ಯಕ್ಕೆ ಭಕ್ತರು ನಿರಾಳರಾಗುವಂತಾಗಿದೆ.
ಸ್ಥಳೀಯರಾದ ಗುರು ಪ್ರಸಾದ್ ದೇವಾಲಯ ಸುತ್ತಲಿನ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿರುವ ಅಧಿಸೂಚನೆ ರದ್ದು ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ. ಎಸ್. ದಿನೇಶ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ಅಲ್ಲದೆ, ಅರ್ಜಿ ಸಂಬಂಧ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.
ಅರ್ಜಿದಾರರ ಪರ ವಕೀಲರು, ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ದೇವಾಲಯ ಸುತ್ತಲಿನ ಸರ್ವೇ ನಂಬರ್ 12ರಲ್ಲಿ ಭೂಮಿ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.
ಈ ಯೋಜನೆ ಪ್ರಕಾರ ಕಾಮಗಾರಿ ನಡೆದರೆ, ದೇವಾಲಯದ ಗೋಡೆಯ ಮೂರು ಅಡಿ ಪಕ್ಕದಲ್ಲೇ ಹೆದ್ದಾರಿ ನಿರ್ಮಾಣವಾಗಲಿದೆ. ಹೆದ್ದಾರಿಯಲ್ಲಿ ಪ್ರತಿದಿನ ಅಂದಾಜು 15 ಸಾವಿರ ವಾಹನಗಳು ಹಾದುಹೋಗಲಿವೆ. ಇದರಿಂದ ಸಾವಿರಾರು ವರ್ಷಗಳ ಹಳೆಯ ದೇಗುಲದ ಕಟ್ಟಡಕ್ಕೆ ಅಪಾಯ ಒದಗಲಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಏನಿದು ಪ್ರಕರಣ?
ಬೈಂದೂರು ತಾಲೂಕಿನ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಪಕ್ಕದಲ್ಲೇ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲು ದೇವಾಲಯ ಸುತ್ತಲಿನ ಸರ್ವೇ ನಂ 12ರಲ್ಲಿನ ಜಮೀನು ಸ್ವಾಧೀನಪಡಿಸಿಕೊಳ್ಳಲು ಸಚಿವಾಲಯವು 2023ರ ಅ.10 ರಂದು ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಗೆ ಆಕ್ಷೇಪಿಸಿ ತಾವು 2023ರ ಅ.26ರಂದು ಸಲ್ಲಿಸಿರುವ ಮನವಿ ಪತ್ರವನ್ನು ಸಚಿವಾಲಯ ಪರಿಗಣಿಸಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಅಲ್ಲದೆ, ಅಧಿಸೂಚನೆ ಪ್ರಕಾರ ದೇವಸ್ಥಾನದ ಪಕ್ಕದ ಮೂಡಿ ಅಡಿ ಸಮೀಪದಲ್ಲೇ ಹೆದ್ದಾರಿ ನಿರ್ಮಾಣವಾಗಲಿದೆ. ಈ ಮಾರ್ಗದಲ್ಲಿ ನಿತ್ಯ 15 ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತದೆ. ಇದರಿಂದ ದೇವಸ್ಥಾನದ ಕಟ್ಟಡಕ್ಕೆ ಅಪಾಯ ಒದಗಲಿದೆ ಎಂದು ಹೇಳಲಾಗಿದೆ.
ಜೊತೆಗೆ ಅರ್ಜಿದಾರರು ಗರ್ಭಗುಡಿ ಕಂಪಿಸಲಿದೆ. ಹಾಗೆಯೇ, ದೇವಸ್ಥಾನದ ಧಾರ್ಮಿಕ ರಥ್ಯೋತ್ಸವ ನೇರವೇರಿಸಲು ಅಡ್ಡಿ ಸೇರಿದಂತೆ ಅನೇಕ ಸಮಸ್ಯೆ ಉಂಟಾಗಲಿವೆ. ಹಾಗಾಗಿ, ಸಚಿವಾಲಯದ ಅಧಿಸೂಚನೆ ರದ್ದುಪಡಿಸಬೇಕು.
ದೇವಾಲಯದ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ನಿರ್ಬಂಧ ಹೇರಬೇಕು. ರಾಷ್ಟ್ರೀಯ ಹೆದ್ದಾರಿಗೆ ನಿರ್ಮಾಣಕ್ಕೆ ಪಯಾರ್ಯ ಮಾರ್ಗ ಕಂಡುಕೊಳ್ಳುವಂತೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.