ಕುಂದಾಪುರ ವೃದ್ಧ ಮಹಿಳೆಯ ಚಿನ್ನದ ಸರ ಎಳೆದೊಯ್ದ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Views: 96
ಕುಂದಾಪುರ ತಾಲೂಕು ಕರ್ಕುಂಜೆ ಗ್ರಾಮದ ನೇರಳಕಟ್ಟೆಯ ಗುಡ್ರಿ ಎಂಬಲ್ಲಿ ವೃದ್ಧ ಮಹಿಳೆಯ ಸರ ಎಳೆದೊಯ್ದ ಘಟನೆ ನಡೆದಿದ್ದು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು 75 ವರ್ಷ ಪ್ರಾಯದ ಬಾಬಿ ದಾಸ್ ಎಂಬವರ ಬಳಿ ನೀರು ಕೇಳುವ ನೆಪದಲ್ಲಿ ಮಾತನಾಡಿಸಿ 8 ಗ್ರಾಂ ತೂಕದ ಚಿನ್ನದ ಸರ ಎಳೆದೊಯ್ದ ಘಟನೆ ಮಾ.5ರಂದು ನಡೆದಿತ್ತು.
ಕಲ್ಬುರ್ಗಿ ಹಾಗರಗಿ ಮೂಲದ ಪ್ರಸ್ತುತ ಬೆಂಗಳೂರು ಯಲಹಂಕ ನಿವಾಸಿ ವಿಜಯ ಕುಮಾರ್ (23), ಕುಂದಾಪುರ ನೇರಳಕಟ್ಟೆ ಹಿಲ್ಕೋಡು ಮೂಲದ ಪ್ರಸ್ತುತ ಯಲಹಂಕ ನಿವಾಸಿ ಮನೋಜ್ (27) ಬಂಧಿತ ಆರೋಪಿಗಳು.
ಪಿಎಸ್‌ಐ ನೂತನ್ ಡಿ. ತಂಡ ಮಾ.11ರಂದು ಬೆಳಗ್ಗೆ ನೇರಳಕಟ್ಟೆ ಬಳಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು ಸುಲಿಗೆ ಮಾಡಿದ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ 1,50,000 ರೂ. ಎಂದು ಅಂದಾಜಿಸಲಾಗಿದೆ.
ಗೂಡಂಗಡಿಯಿಟ್ಟುಕೊಂಡಿದ್ದ ಬಾಬಿ ದಾಸ್ ಒಂಟಿಯಾಗಿದ್ದ ವೇಳೆ ಬೈಕಿನಲ್ಲಿ ಬಂದ ಅಪರಿಚಿತ ಯುವಕರಿಬ್ಬರು ನೀರು ಕೇಳಿ ಅಂಗಡಿಗೆ ಬಂದು ಬಾಬಿಯವರ ಕುತ್ತಿಗೆಯಲ್ಲಿದ್ದ 8ಗ್ರಾಂ ತೂಕದ ಚಿನ್ನದ ಸರವನ್ನು ಎಳೆದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆ ಬಗ್ಗೆ ಉಡುಪಿ ಜಿಲ್ಲಾ ಎಸ್ಪಿ ಅರುಣ್ ಕೆ. ಅವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪ, ಕುಂದಾಪುರ ಡಿವೈಎಸ್ಪಿ ಕೆ.ಯು.ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖಾಧಿಕಾರಿಯಾಗಿದ್ದ ಕುಂದಾಪುರ ವೃತ್ತ ನಿರೀಕ್ಷಕ ಜಯರಾಮ ಡಿ. ಗೌಡ ನೇತೃತ್ವದಲ್ಲಿ ಗ್ರಾಮಾಂತರ ಠಾಣೆ ಪಿಎಸ್‌ಐಗಳಾದ ಭೀಮಾಶಂಕರ್, ನೂತನ್ ಡಿ.ಈ. ಶಂಕರನಾರಾಯಣ ಠಾಣೆ ಪಿಎಸ್‌ಐ ಶಂಭುಲಿಂಗ ಅವರನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.
ಆರೋಪಿಗಳ ಪತ್ತೆಯಲ್ಲಿ ಕುಂದಾಪುರ ಉಪವಿಭಾಗ ಠಾಣೆಯ ಎ.ಎಸ್.ಐ ಸೀತಾರಾಮ ಹಾಗೂ ಸಿಬ್ಬಂದಿಗಳಾದ ರಾಜು, ಚಿದಾನಂದ, ಕಿಶನ್, ಗುರುರಾಜ್, ಮಂಜುನಾಥ, ಸಚಿನ್, ನವೀನ್, ಮೌನೇಶ್, ರಾಮು ಹೆಗ್ಡೆ, ರಾಘವೇಂದ್ರ ಮತ್ತು ತಾಂತ್ರಿಕ ವಿಭಾಗದ ಸಿಬ್ಬಂದಿ ದಿನೇಶ್ ಸಹಕರಿಸಿದ್ದರು.