ಗಣರಾಜ್ಯೋತ್ಸವದಂದು ಪ್ರವಾಸಿ ಬೋಟ್ ಮಗುಚಿ ಮೂವರು ಮೃತಪಟ್ಟ ಬೆನ್ನಲ್ಲೇ ಜಿಲ್ಲಾಧಿಕಾರಿ ಆದೇಶವೇನು?
Views: 93
ಕನ್ನಡ ಕರಾವಳಿ ಸುದ್ದಿ: ಜಿಲ್ಲೆಯಲ್ಲಿ ಪ್ರವಾಸಿಗರನ್ನು ಕರೆದೊಯ್ಯುವ ಎಲ್ಲಾ ಪ್ರವಾಸಿ ಬೋಟ್‌ಗಳು ಬಂದರು, ಪೊಲೀಸ್, ಕರಾವಳಿ ಕಾವಲು ಪಡೆ, ಸ್ಥಳೀಯ ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆದೇ ಕಡಲಿಗೆ ಇಳಿಯಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸ್ಪಷ್ಟಪಡಿಸಿದ್ದಾರೆ.
ಗಣರಾಜ್ಯೋತ್ಸವದಂದು ಪ್ರವಾಸಿ ಬೋಟ್ ಒಂದು ಮಗುಚಿ ಮೂವರು ಮೃತಪಟ್ಟ ಬೆನ್ನಲ್ಲೇ ಈ ಆದೇಶ ಮಾಡಲಾಗಿದೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಡಲ ತೀರದಲ್ಲಿ ತೆಗೆದುಕೊಳ್ಳಬೇಕಾದ ಭದ್ರತೆ ಕುರಿತು ಚರ್ಚಿಸಲು ಕರೆಯಲಾದ ಸಭೆಯಲ್ಲಿ ಅವರು ಈ ಆದೇಶ ನೀಡಿದ್ದಾರೆ.
ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಕಡಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು, ಪ್ರಯಾಣದ ಅನುಭವ ಪಡೆಯಲು ಪ್ರವಾಸಿ ಬೋಟ್‌ಗಳ ಮೊರೆ ಹೋಗುತ್ತಾರೆ. ಆದ್ದರಿಂದ ಇಂಥ ಬೋಟುಗಳು ಸಂಬಂಧಿತ ಎಲ್ಲಾ ಇಲಾಖೆಗಳಿಂದ ಅಗತ್ಯ ಪರವಾನಗಿ ಪಡೆದೇ ಕಾರ್ಯಾಚರಿಸಬೇಕು ಎಂದು ತಿಳಿಸಿದರು.
ಜಿಲ್ಲೆಯ ಕಡಲ ತೀರ ಸೇರಿದಂತೆ ಪ್ರವಾಸಿ ತಾಣಗಳ ಸೌಂದರ್ಯ ಸವಿಯಲು ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಯಾವುದೇ ಪ್ರಾಣಾಪಾಯಗಳು ಸಂಭವಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಪ್ರವಾಸೋದ್ಯಮ ಉದ್ದೇಶಕ್ಕೆ ಬಳಸುವ ಪ್ರವಾಸಿ ಬೋಟ್ ಮಾಲೀಕರ ಸಭೆಯನ್ನು ಶೀಘ್ರದಲ್ಲಿ ಕರೆದು ಪರವಾನಗಿ ಪಡೆಯುವಂತೆ ಸೂಚನೆ ನೀಡಬೇಕು. ಜಿಲ್ಲೆಯ ಪ್ರವಾಸಿ ಬೋಟ್‌ಗಳ ಮಾಲೀಕರು ಹಾಗೂ ಅದನ್ನು ಚಲಾಯಿಸುವವರಿಗೆ ಕಾರ್ಯಾಗಾರವನ್ನು ಆಯೋಜಿಸಿ, ಸುರಕ್ಷತಾ ವಿಧಾನ ಅನುಸರಿಸುವ ಬಗ್ಗೆ ವಿಮೆ ಸೌಲಭ್ಯ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಬೇಕು. ಜೀವ ರಕ್ಷಕ ಸಿಬ್ಬಂದಿಯೂ ಸಹ ಜೀವ ರಕ್ಷಣಾ ವಿಧಾನಗಳ ಬಗ್ಗೆ ಮಾಹಿತಿ ಹೊಂದಿರುವಂತೆ ನೋಡಿಕೊಳ್ಳಬೇಕು ಎಂದರು.
ರೆಸಾರ್ಟ್ವೊಂದರಲ್ಲಿ ಉಳಿದಿದ್ದ 14 ಮಂದಿ ಪ್ರವಾಸಿಗರನ್ನು ವಿಹಾರಕ್ಕೆಂದು ದೋಣಿಯಲ್ಲಿ ಸಮುದ್ರಕ್ಕೆ ಕರೆದುಕೊಂಡು ಹೋಗಲಾಗಿತ್ತು. ಇವರ ಪೈಕಿ ಕೆಲವರು ಲೈಫ್ ಜಾಕೆಟ್ ಧರಿಸಿರಲಿಲ್ಲ. ಸಮುದ್ರ ಮಧ್ಯೆ ದೋಣಿ ಆಕಸ್ಮಿಕವಾಗಿ ಮುಳುಗಿದ್ದು, ಎಲ್ಲ ಪ್ರವಾಸಿಗರು ನೀರಿಗೆ ಬಿದ್ದಿದ್ದರು. ಇದರಲ್ಲಿ ಹಲವು ಮಂದಿಯನ್ನು ರಕ್ಷಿಸಲಾಗಿತ್ತು. ಆದರೆ, ನಾಲ್ವರು ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಇಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಮತ್ತೋರ್ವ ವ್ಯಕ್ತಿಯೂ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದರು.






