ಸಾಮಾಜಿಕ

ಪ್ರೇಮ ವಿವಾಹವಾಗಿದ್ದ ಯುವತಿಯ ಅಪಹರಣ:ಕಾರಿನಲ್ಲಿಯೇ ಲೈಂಗಿಕ ದೌರ್ಜನ್ಯವೆಸಗಿದ್ದ ದುಷ್ಕರ್ಮಿಗಳು!

Views: 35

ಕನ್ನಡ ಕರಾವಳಿ ಸುದ್ದಿ: ರಾಜಸ್ಥಾನದಲ್ಲಿ ಪ್ರೇಮವಿವಾಹವಾಗಿ ನಗರದಲ್ಲಿ ನೆಲೆಸಿದ್ದ ಮಹಿಳೆಯನ್ನು ಅಪಹರಿಸಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿ ಅಪಘಾತಕ್ಕೆ ಕಾರಣರಾಗಿದ್ದ 6 ಮಂದಿಯಲ್ಲಿ ಮೂವರು ಅಪಹರಣಕಾರರನ್ನು ಬಂಧಿಸಿರುವ ಮಾಗಡಿ ರಸ್ತೆ ಪೊಲೀಸರು ವಿಚಾರಣೆ ವೇಳೆ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವುದನ್ನು ಕಂಡುಕೊಂಡಿದ್ದಾರೆ.

ರಾಜಸ್ಥಾನದ ಪಾಲಿ ಜಿಲ್ಲೆ ಮೂಲದ ಮಹಿಳೆಯು ಓಂ ಪ್ರಕಾಶ್ ಎಂಬುವನನ್ನು 9 ತಿಂಗಳ ಹಿಂದೆ ರಾಜಸ್ಥಾನದಲ್ಲಿ ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಕಳೆದ 15 ದಿನಗಳಿಂದ ಅಗ್ರಹಾರ ದಾಸರಹಳ್ಳಿ ಬಾಡಿಗೆ ಮನೆಯೊಂದರಲ್ಲಿದ್ದರು. ಪ್ರೇಮ ವಿವಾಹಕ್ಕೆ ಮಹಿಳೆಯ ಕುಟುಂಬಸ್ಥರು ವಿರೋಧಿಸಿದ್ದರು. ಬೆಂಗಳೂರಿನಲ್ಲಿರುವುದಾಗಿ ಮಾಹಿತಿ ಅರಿತು ನಾಲ್ವರು ಅಪಹರಣಕಾರರು ಮಹಿಳೆಯನ್ನು ಮನೆಯಿಂದ ಬಲವಂತವಾಗಿ ಎಳೆದೊಯ್ದು ಕಾರಿನಲ್ಲಿ ಅಪಹರಿಸಿದ್ದರು. ಕಾರಿನಲ್ಲಿರುವಾಗ ಓರ್ವ ವ್ಯಕ್ತಿಯು ತನ್ನ ಕೈ ಹಿಡಿದು ಮುತ್ತು ಕೊಟ್ಟು ಖಾಸಗಿ ಭಾಗಗಳನ್ನು ಬಲವಂತವಾಗಿ ಮುಟ್ಟಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪಾಲಿ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಓಂ ಪ್ರಕಾಶ್ ಪರಿಚಯವಾಗಿದ್ದ. ನಾವಿಬ್ಬರು ಒಂದೇ ಗ್ರಾಮದವರಾಗಿದ್ದು, ಮೂರ್ನಾಲ್ಕು ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದೆವು. ನಮ್ಮ ಪ್ರೀತಿಗೆ ಎರಡು ಮನೆಯವರು ವಿರೋಧಿಸಿದ್ದರು. ಹೀಗಾಗಿ ಕಳೆದ ಫೆಬ್ರುವರಿ 13ರಂದು ನ್ಯಾಯಾಧೀಶರ ಸಮ್ಮುಖದಲ್ಲಿ ಪ್ರೇಮ ವಿವಾಹವಾಗಿದ್ದೆವು. ಜೀವಭಯದಿಂದ ಚಾಮರಾಜಪೇಟೆಯಲ್ಲಿ ನೆಲೆಸಿದ್ದ ಪತಿಯ ಸಹೋದರನ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದೆವು ಎಂದು ಮಹಿಳೆ ತಿಳಿಸಿದ್ದಾರೆ.

10 ದಿನಗಳ ಹಿಂದೆ ಅಗ್ರಹಾರ ದಾಸರಹಳ್ಳಿ ಮನೆಯೊಂದರಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೆವು. ಬುಧವಾರ ರಾತ್ರಿ 7 ಗಂಟೆಗೆ ಏಕಾಏಕಿ ನಾಲ್ವರು ಮನೆಗೆ ಬಂದು ಬಲವಂತವಾಗಿ ಕರೆದೊಯ್ದು ಕಾರಿನಲ್ಲಿ ಅಪಹರಿಸಿದ್ದರು. ಕಾರಿನಲ್ಲಿದ್ದಾಗ ಹಿಂಬದಿ ಆಸನದಲ್ಲಿದ್ದ ವ್ಯಕ್ತಿಯೋರ್ವ ಯಾರೇ ಬಂದರೂ ಕಾರನ್ನ ನಿಲ್ಲಿಸಬೇಡ. ಅಡ್ಡ ಬಂದರೆ ಗುದ್ದಿಕೊಂಡು ಹೋಗುವಂತೆ ಸೂಚಿಸಿದ್ದ. ನನ್ನ ಪಕ್ಕದಲ್ಲಿದ್ದ ವ್ಯಕ್ತಿಯೋರ್ವ ಬಲವಂತವಾಗಿ ಕೈಹಿಡಿದು ಚುಂಬಿಸಿ ಖಾಸಗಿ ಭಾಗವನ್ನು ಮುಟ್ಟಿ ದೌರ್ಜನ್ಯವೆಸಗಿದ್ದ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಅಪಹರಣದ ಹಿಂದೆ ಸೋದರತ್ತೆ ಕೈವಾಡ: ಪ್ರೇಮ ವಿವಾಹವನ್ನು ವಿರೋಧಿಸಿದ್ದ ಮಹಿಳೆಯ ಮನೆಯವರು ಬೆಂಗಳೂರಿನ ಮನೆ ವಿಳಾಸವನ್ನು ತಿಳಿದುಕೊಂಡಿದ್ದರು. ಮಹಿಳೆಯ ಅತ್ತೆ ಪಾಣಿದೇವಿ ಎಂಬಾಕೆ ಸೂಚನೆ ಮೇರೆಗೆ ದುಷ್ಕರ್ಮಿಗಳು ಮಹಿಳೆಯನ್ನು ಅಪಹರಿಸಿದ್ದರು. ಅಪಹರಣ ವೇಳೆ ದುಷ್ಕರ್ಮಿಗಳ ಮೊಬೈಲ್ಗೆ ವಿಡಿಯೋ ಕರೆ ಮಾಡಿ ಮಾತನಾಡಿದ್ದಾರೆ. ಮನೆಗೆ ವಾಪಸ್ ಬಂದುಬಿಡು. ಬರದಿದ್ದರೆ ನಿನ್ನ ಗಂಡನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ನಾವೆಲ್ಲ ಸೇರಿಕೊಂಡು ನಿನ್ನನ್ನು ಕಿಡ್ನ್ಯಾಪ್ ಮಾಡಿದ್ದೇವೆ. ಏನು ಮಾತನಾಡದೆ ಅವರ ಜೊತೆ ಬರುವಂತೆ ತಾಕೀತು ಮಾಡಿದ್ದರು ಎಂದು ಮಹಿಳೆ ತಿಳಿಸಿದ್ದಾರೆ.

ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ನಗರದ ಪಶ್ಚಿಮ ವಿಭಾಗದ ಡಿಸಿಪಿ ಎನ್. ಯತೀಶ್, ಬುಧವಾರ ಸಂಜೆ 7:30ರ ಸುಮಾರಿಗೆ ನಾಲ್ವರು ಆರೋಪಿಗಳು ರಾಜಸ್ಥಾನ ಮೂಲದ ಮಹಿಳೆಯ ಅಪಹರಣಕ್ಕೆ ಯತ್ನಿಸಿದ್ದರು. ಏಕಾಏಕಿ ಕಾರಿನಲ್ಲಿ ಬಂದು ಒತ್ತಾಯಪೂರ್ವಕವಾಗಿ ಕರೆದೊಯ್ದದಿದ್ದರು. ಅಡ್ಡಾದಿಡ್ಡಿ ವಾಹನ ಚಾಲನೆ ಮಾಡಿ ಆರು ಜನ ಪಾದಚಾರಿಗಳಿಗೆ ಅಪಘಾತವೆಸಗಿದ್ದರು. ಸ್ಥಳೀಯರು ಕಾರನ್ನು ಅಡ್ಡಹಾಕಿ ತಡೆದು ಆರೋಪಿಗಳನ್ನು ಹಿಡಿದು ಒಪ್ಪಿಸಿದ್ದಾರೆ. ಕೃತ್ಯವೆಸಗಿದ ನಾಲ್ವರ ಪೈಕಿ ಮೂವರನ್ನು ಬಂಧಿಸಲಾಗಿದೆ. ಕಾರಿನ ಚಾಲಕ ಪರಾರಿಯಾಗಿದ್ದು, ಬಂಧನಕ್ಕಾಗಿ ಶೋಧ ನಡೆಸಲಾಗುತ್ತಿದೆ. ಮಹಿಳೆಯು ಪ್ರೇಮ ವಿವಾಹವಾಗಿ ನಗರದಲ್ಲಿ ನೆಲೆಸಿದ್ದರು. ಪತಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಘಟನೆ ಸಂಬಂಧ ಬಿಎನ್ಎಸ್ ವಿವಿಧ ಸೆಕ್ಷನ್ ಅಡಿಯಲ್ಲಿ ಅಪಹರಣ, ಒಳಸಂಚು ಹಾಗೂ ಹತ್ಯೆಗೆ ಯತ್ನ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ದುಷ್ಕರ್ಮಿಗಳು ಅಪಹರಣ ವೇಳೆ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿ ನ್ಯಾಯಾಧೀಶರ ಕಾರು ಸೇರಿ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದಿದ್ದರು. ಪರಿಣಾಮ ಪೃಥ್ವಿರಾಜ್ (12), ಯಶಿಕಾ (9), ಅಮೂಲ್ (35), ಮಣಿ (64), ಜಯಲಕ್ಷ್ಮಿ (57), ಸಂತೋಷ್ (33) ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ ಜಯಲಕ್ಷ್ಮೀ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಿಸ್ಥಿತಿ ಚಿಂತಾಜನಕವಾಗಿದೆ. ಕೃತ್ಯವೆಸಗಿದ್ದ ರಾಜಸ್ಥಾನ ಮೂಲದ ರಾಕೇಶ್ ಕರಣ್‌, ಮತ್ತು ಆಯಾಸ್‌ ಎಂಬುವರನ್ನು ಬಂಧಿಸಲಾಗಿದೆ. ಕಾರು ಚಾಲಕ ಸದ್ದಾಂ ಎಸ್ಕೇಪ್ ಆಗಿದ್ದಾನೆ ಎಂದು ತಿಳಿಸಿದರು.

Related Articles

Back to top button
error: Content is protected !!