ಯುವಜನ

ಏಕಮುಖ ಪ್ರೀತಿ: ಪ್ರೀತಿಸಲು ಒಪ್ಪದಿದ್ದ ಯುವತಿಯನ್ನು ಹಾಡಹಗಲೇ ಕೊಚ್ಚಿ ಕೊಲೆಗೈದ ಪಾಗಲ್ ಪ್ರೇಮಿ

Views: 292

ಕನ್ನಡ ಕರಾವಳಿ ಸುದ್ದಿ: ಏಕಮುಖವಾಗಿ ಪ್ರೀತಿ ಮಾಡುತ್ತಿದ್ದ ಪಾಗಲ್ ಪ್ರೇಮಿಯೋರ್ವನು ಪ್ರೀತಿಸಲು ಒಪ್ಪದಿದ್ದ ಯುವತಿಯನ್ನು ಹಾಡಹಗಲೇ ಕೊಚ್ಚಿ ಕೊಲೆಗೈದ ಘಟನೆ ಬಂಟ್ವಾಳ ತಾಲೂಕಿನ ಬಿ.ಸಿ. ರೋಡಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಕಕ್ಕೆಪದವು ನಿವಾಸಿ, ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಮ್ನಲ್ಲಿ ಕೆಲಸ ಮಾಡುತ್ತಿದ್ದ ಲಾವಣ್ಯ ಮಾರಕಾಸ್ತ್ರದಿಂದ ದಾಳಿಗೊಳಗಾದ ಯುವತಿ. ಚೇತನ್ ಎಂಬಾತ ಕೊಲೆಗೈದ ಆರೋಪಿ.

ಆರೋಪಿ ಚೇತನ್ ಯುವತಿಯ ದೂರದ ಸಂಬಂಧಿಯಾಗಿದ್ದು, ಲಾವಣ್ಯಳನ್ನು ಏಕಮುಖವಾಗಿ ಪ್ರೀತಿಸುತ್ತಿದ್ದ ಎಂದು ತಿಳಿದುಬಂದಿದೆ. ಗುರುವಾರ ಸಂಜೆ 6 ಗಂಟೆಗೆ ಲಾವಣ್ಯ ಬಿ.ಸಿ. ರೋಡಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಮನೆಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದಳು. ಈ ವೇಳೆ ಅಲ್ಲಿಗೆ ಬಂದ ಚೇತನ್ ತನ್ನ ಬ್ಯಾಗ್‌ನಿಂದ ಹರಿತವಾದ ಆಯುಧ ಹೊರತೆಗೆದಿದ್ದಾನೆ. ಇದನ್ನು ಗಮನಿಸಿ ಲಾವಣ್ಯ ಅಲ್ಲಿಂದ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಆದರೆ ಚೇತನ್ ಆಕೆಯನ್ನು ಬೆನ್ನಟ್ಟಿ ಬಸ್ ನಿಲ್ದಾಣದಲ್ಲೇ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ.

ದಾಳಿಯಿಂದ ತೀವ್ರ ರಕ್ತಸ್ರಾವಕ್ಕೊಳಗಾಗಿ ನರಳುತ್ತಿದ್ದ ಯುವತಿಯನ್ನು ಬಸ್ ನಿಲ್ದಾಣದಲ್ಲಿದ್ದವರು ತಕ್ಷಣ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

Related Articles

Back to top button
error: Content is protected !!