ಕ್ರೀಡೆ
ಆರ್‌ಸಿಬಿ ಅಭಿಮಾನಿ ಸಂಭ್ರಮಾಚರಣೆಯಲ್ಲಿ ನೃತ್ಯ ಮಾಡುವಾಗ ಹೃದಯಾಘಾತಕ್ಕೆ ಬಲಿ

Views: 74
ಕನ್ನಡ ಕರಾವಳಿ ಸುದ್ದಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿಗೆ ಐಪಿಎಲ್ 18ನೇ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮುತ್ತಲೆ ನಿನ್ನೆ ರಾತ್ರಿಯಿಂದ ಬೆಳಿಗ್ಗೆಯವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದ್ದಾರೆ. ಅದೇ ರೀತಿ, ಬೆಳಗಾವಿಯಲ್ಲಿ, ಆರ್‌ಸಿಬಿ ಅಭಿಮಾನಿಯೊಬ್ಬರು ನೃತ್ಯ ಮಾಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ನಿನ್ನೆ ರಾತ್ರಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಅವರಾದಿ ಗ್ರಾಮದಲ್ಲಿ ಆರ್‌ಸಿಬಿ ಗೆಲುವಿನ ನಂತರ ನಡೆದ ಸಂಭ್ರಮಾಚರಣೆಯ ಸಮಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಟ್ಟಾ ಅಭಿಮಾನಿ ಮಂಜುನಾಥ್ ಈರಪ್ಪ ಕಂಬಾರ್ (28) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಡೆದ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯ ಸಮಯದಲ್ಲಿ ನೃತ್ಯ ಮಾಡುವಾಗ ಪ್ರಜ್ಞೆ ತಪ್ಪಿ ಬಿದ್ದು ಮಂಜುನಾಥ್ ನಿಧನರಾಗಿದ್ದಾರೆ.ಮೃತ ಮಂಜುನಾಥ್ ಗೆ ಆರು ತಿಂಗಳ ಹೆಣ್ಣು ಮಗುವಿದೆ. ಕುಟುಂಬದಲ್ಲಿ ಈಗ ಶೋಕ ಮಡುಗಟ್ಟಿದೆ.