ಅವಿವಾಹಿತೆಗೆ ಜನಿಸಿದ ಮಗು 60 ಸಾವಿರಕ್ಕೆ ಡೀಲ್; ಅಂಗನವಾಡಿ ಕಾರ್ಯಕರ್ತೆ, ಜನ್ಮ ನೀಡಿದ ತಾಯಿ, ಪ್ರಿಯಕರ ಬಂಧನ

Views: 537
ಕನ್ನಡ ಕರಾವಳಿ ಸುದ್ದಿ: ಕುಣಿಗಲ್ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ 60 ಸಾವಿರಕ್ಕೆ ನವಜಾತ ಶಿಶು ಮಾರಾಟಕ್ಕೆ ಸಂಬಂಧಿಸಿದಂತೆ ಅಂಗನವಾಡಿ ಕಾರ್ಯಕರ್ತೆ, ಜನ್ಮ ನೀಡಿದ ತಾಯಿ, ಪ್ರಿಯಕರಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಫೆ. 20ರಂದು ಕುಣಿಗಲ್ ತಾಲೂಕು ಆಸ್ಪತ್ರೆಯಲ್ಲಿ ರಾಮನಗರ ಜಿಲ್ಲೆಯ ಮಾಗಡಿಯ 21 ವರ್ಷದ ಅವಿವಾಹಿತೆ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿ, ಮಗುವನ್ನು ಕರೆದೊಯ್ಯಲು ನಿರಾಕರಿಸಿದ್ದಳು. ಆಕೆಯ ಪ್ರಿಯಕರ ಅಂಗನವಾಡಿ ಕಾರ್ಯಕರ್ತೆ ಮೂಲಕ ಮಗುವನ್ನು ಮಾರಾಟ ಮಾಡಿದ್ದ. ಈ ವಿಚಾರ ತಿಳಿದ ಕೂಡಲೇ ಯುವತಿಯ ಪೋಷಕರು ಮಗು ವಾಪಸ್ ಪಡೆಯಲು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ವೇಳೆ ಶಿಶು ಮಾರಾಟ ಪ್ರಕರಣ ಬೆಳಕಿಗೆ ಬಂದಿದೆ.
ಮಗುವಿಗೆ ಜನ್ಮ ನೀಡಿದ ಬಳಿಕ ತಾಯಿ ಹಾಗೂ ಆಕೆಯ ಪ್ರಿಯಕರ ಶ್ರೀನಂದ ಎಂಬಾತ ಮಗುವನ್ನು ಮಾರಾಟ ಮಾಡುವ ಎಂದು ನಿರ್ಧರಿಸಿದ್ದರು. ಆದರಂತೆ ಶ್ರೀನಂದ ಮಾಗಡಿಯ ಜ್ಯೋತಿ ಎಂಬುವವರನ್ನು ಸಂಪರ್ಕಿಸಿ ನಡೆದ ವಿಚಾರವನ್ನು ತಿಳಿಸಿದ್ದ. ಬಳಿಕ ಮಾಗಡಿಯ ಜ್ಯೋತಿ ಕುಣಿಗಲ್‌ನ ಕೊತ್ತಗೆರೆ ಅಂಗನವಾಡಿ ಕಾರ್ಯಕರ್ತೆ ಎನ್.ಜ್ಯೋತಿಯನ್ನು ಶಿಶು ಮಾರಾಟಕ್ಕೆ ಸಂಪರ್ಕಿಸಿದ್ದಾರೆ. ನಂತರ ಎನ್.ಜ್ಯೋತಿ ಕೊತ್ತಗೆರೆಯ ಮುಭಾರಕ್ ಪಾಷಾನನ್ನು ಸಂಪರ್ಕಿಸಿ ಮಗುವನ್ನು 60 ಸಾವಿರಕ್ಕೆ ಮಾರಾಟ ಮಾಡಲು ಡೀಲ್ ಮಾಡಿಕೊಂಡಿದ್ದರು.
ಇತ್ತ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಯುವತಿ ಮನೆಗೆ ತೆರಳಿದ್ದ ವೇಳೆ ಹೆರಿಗೆ ವಿಚಾರವನ್ನು ಪಾಲಕರ ಮುಂದೆ ಬಾಯಿಬಿಟ್ಟಿದ್ದಾಳೆ. ಈ ವೇಳೆ ಸಿಟ್ಟಾದ ಪೋಷಕರು ಮಗುವನ್ನು ಮರಳಿ ಕರೆದುಕೊಂಡು ಬಾ ಎಂದು ತಿಳಿಸಿದ್ದಾರೆ. ಆದರೆ ಯುವತಿಗೆ ಮಾರಾಟ ಜಾಲದ ಬಗ್ಗೆ ಗೊತ್ತಿದ್ದ ಹಿನ್ನೆಲೆಯಲ್ಲಿ ಆಕೆ ಹಿಂದೇಟು ಹಾಕಿದ್ದಾಳೆ.
ಕೂಡಲೇ ಯುವತಿಯ ಪೋಷಕರು ಮಗು ವಾಪಸ್ ಪಡೆಯಲು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ವೇಳೆ ಶಿಶು ಮಾರಾಟ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ತಾಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಹುಚ್ಚರಂಗಮ್ಮ ದೂರು ನೀಡಿದ್ದರು. ಅದರಂತೆ ಇದೀಗ ಕುಣಿಗಲ್ ಪೊಲೀಸರು ಮಗುವಿನ ತಾಯಿ, ಆಕೆಯ ಪ್ರಿಯಕರ ಶ್ರೀನಂದ, ಕುಣಿಗಲ್‌ನ ಅಂಗನವಾಡಿ ಕಾರ್ಯಕರ್ತೆ ಎನ್. ಜ್ಯೋತಿ, ಮುಭಾರಕ್ ಪಾಷಾ, ಮಾಗಡಿಯ ಜ್ಯೋತಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.