ರಾಜಕೀಯ

INDIA ಮೈತ್ರಿಕೂಟಕ್ಕೆ AIADMK ಸೇರ್ಪಡೆ ವಿಚಾರ: ಡಿಎಂಕೆ ಜೊತೆ ಚರ್ಚಿಸಿದ ಬಳಿಕ ನಿರ್ಧಾರ: ಶರದ್ ಪವಾರ್

Views: 0

.ಎಐಎಡಿಎಂಕೆಯನ್ನು INDIA ಮೈತ್ರಿಕೂಟದ ಜೊತೆ ಸೇರಿಸಿಕೊಳ್ಳುವ ನಿರ್ಧಾರದ ಬಗ್ಗೆ ಡಿಎಂಕೆ ಅಥವಾ ಅದರ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರನ್ನು ಸಂಪರ್ಕಿಸಲಾಗುವುದು ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಮಂಗಳವಾರ ಹೇಳಿದ್ದಾರೆ.

ಸೋಮವಾರ ಎಐಎಡಿಎಂಕೆ ಪಕ್ಷವು ಬಿಜೆಪಿಯೊಂದಿಗಿನ ತನ್ನ ನಾಲ್ಕು ವರ್ಷಗಳ ಸಂಬಂಧವನ್ನು ಕೊನೆಗೊಳಿಸಿರುವುದಾಗಿ ಅಧಿಕೃತವಾಗಿ ಘೋಷಿಸಿತು. ಇದರೊಂದಿಗೆ ಎನ್‌ಡಿಎ ಮೈತ್ರಿಕೂಟದಿಂದ ಹೊರನಡೆದಿದೆ. 2024ರ ಲೋಕಸಭೆ ಚುನಾವಣೆಗೆ ಪ್ರತ್ಯೇಕ ರಂಗವನ್ನು ಮುನ್ನಡೆಸುವುದಾಗಿ ಹೇಳಿದೆ.

ಎಐಎಡಿಎಂಕೆಯನ್ನು ಇಂಡಿಯಾ ಬ್ಲಾಕ್ ಅಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪವಾರ್, ”ಡಿಎಂಕೆಯು INDIA ಮೈತ್ರಿಕೂಟದ ಭಾಗವಾಗಿದೆ. ಹಾಗಾಗಿ ಡಿಎಂಕೆ ಅಥವಾ ಸ್ಟಾಲಿನ್ ಅವರನ್ನು ಸಂಪರ್ಕಿಸದೆ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.

INDIA ಮೈತ್ರಿಯು 28 ವಿರೋಧ ಪಕ್ಷಗಳ ಒಕ್ಕೂಟವಾಗಿದ್ದು, 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ NDAಯನ್ನು ಎದುರಿಸುವ ಗುರಿಯನ್ನು ಹೊಂದಿದೆ.

2024ರ ಸಾರ್ವತ್ರಿಕ ಚುನಾವಣೆಗು ಮುನ್ನವೇ ತಮಿಳುನಾಡಿನ ಎಐಎಡಿಎಂಕೆ ಪಕ್ಷ ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆಗಿನ ಮೈತ್ರಿಯನ್ನು ಸೋಮವಾರ ಅಧಿಕೃತವಾಗಿ ಮುರಿದುಕೊಂಡಿದೆ.

ಈ ಬಗ್ಗೆ ಎಐಎಡಿಎಂಕೆ ಉಪ ಸಂಯೋಜಕ ಕೆ.ಪಿ. ಮುನುಸಾಮಿ ಅವರು ಚೆನ್ನೈನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಮಾತನಾಡಿದ್ದು, ”ಇಂದಿನಿಂದ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟದೊಂದಿಗಿನ ಎಲ್ಲಾ ಸಂಬಂಧಗಳನ್ನು ಎಐಎಡಿಎಂಕೆ ಮುರಿದುಕೊಳ್ಳುತ್ತಿದೆ” ಎಂದು ತಿಳಿಸಿದ್ದಾರೆ.

”ಬಿಜೆಪಿಯ ರಾಜ್ಯ ನಾಯಕತ್ವವು ನಮ್ಮ ಮಾಜಿ ನಾಯಕರು, ನಮ್ಮ ಕಾರ್ಯಕರ್ತರು ಮತ್ತು ನಮ್ಮ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಬಗ್ಗೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ಅನಗತ್ಯ ಟೀಕೆಗಳನ್ನು ಮಾಡುತ್ತಿದೆ” ಎಂದು ಅವರು ಹೇಳಿದ್ದಾರೆ.

”ಈ ಕುರಿತು ನಡೆದ ಸಭೆಯಲ್ಲಿ ಪಕ್ಷದ ಶಾಸಕರು ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿದ್ದಾರೆ. ಪಕ್ಷವು ಹೊಸ ಮೈತ್ರಿಕೂಟವನ್ನು ರಚಿಸುತ್ತದೆ ಮತ್ತು ಮುಂಬರುವ ಸಂಸತ್ತಿನ ಚುನಾವಣೆಯನ್ನು ಸ್ವತಃ ಎದುರಿಸಲಿದೆ” ಎಂದು ಅವರು ಘೋಷಿಸಿದ್ದಾರೆ.

Related Articles

Back to top button