HSRP: ಗಡುವು ಜೂನ್ 12ಕ್ಕೆ ಅಂತ್ಯ, ದಂಡ ವಿಧಿಸಲಾಗುತ್ತದೆಯೇ? ಗಡುವು ಮತ್ತೆ ವಿಸ್ತರಣೆಯಾಗುತ್ತದೆಯೇ?

Views: 124
ಬೆಂಗಳೂರು, ಕರ್ನಾಟಕ ಸರ್ಕಾರ ಹೇಳಿರುವ ಗಡುವು ಬುಧವಾರಕ್ಕೆ ಮುಕ್ತಾಯವಾಗುತ್ತದೆ. ಗುರುವಾರದಿಂದ ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ಆಳವಡಿಕೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆಯೇ? ಅಥವಾ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಇರುವ ಗಡುವು ಮತ್ತೆ ವಿಸ್ತರಣೆಯಾಗುತ್ತದೆಯೇ?
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈ ಕುರಿತು ಮಾತನಾಡಿದ್ದಾರೆ. ಮತ್ತೊಂದು ಕಡೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಸಿದ್ದಪಡಿಸುವ ಕಂಪನಿಗಳಲ್ಲಿ ಒಂದಾದ ಬಿಎನ್‌ಡಿ ಎನಾರ್ಜಿ ಲಿಮಿಟೆಡ್ ನಂಬರ್ ಪ್ಲೇಟ್ ಅಳವಡಿಸಲು ವಿಧಿಸಿರುವ ಗಡುವು ವಿಸ್ತರಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿ ಕರ್ನಾಟಕ ಹೈಕೋರ್ಟ್‌ನಲ್ಲಿ ಬುಧವಾರ ವಿಚಾರಣೆಗೆ ಬರಲಿದೆ.
ಕರ್ನಾಟಕ ಹೈಕೋರ್ಟ್ ಜೂನ್ 12ರಂದು ಯಾವ ಆದೇಶ ನೀಡಲಿದೆ? ಎಂದು ಕಾದು ನೋಡಬೇಕು. ಅಲ್ಲದೇ ಜೂನ್ 15ರಂದು ಸಚಿವ ಸಂಪುಟ ಸಭೆ ಇದ್ದು, ಸರ್ಕಾರ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡದಿದ್ದರೆ ದಂಡ ವಿಧಿಸಲಿದೆಯೇ? ಕಾದು ನೋಡಬೇಕು.
ಸಾರಿಗೆ ಸಚಿವರು ಹೇಳಿದ್ದೇನು?; ಸಚಿವ ರಾಮಲಿಂಗಾ ರೆಡ್ಡಿ ಹೆಚ್ಎಸ್‌ಆರ್‌ಪಿ ನಂಬರ್ ಪ್ಲೇಟ್ ವಿಚಾರದ ಬಗ್ಗೆ ಮಾತನಾಡಿದ್ದಾರೆ, “ಆಂತರಿಕ ಸುರಕ್ಷತೆ ಮುಂತಾದ ಕಾರಣಗಳಿಂದ ವಾಹನಗಳಿಗೆ ಹೆಚ್‌ಎಸ್ಆರ್‌ಪಿ ಕಡ್ಡಾಯ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ. ಅದರಂತೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ” ಎಂದರು.
“ಜನರ ಮನವಿಗೆ ಸ್ಪಂದಿಸಿ ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡುವ ಗಡುವು ಎರಡು ಬಾರಿ ವಿಸ್ತರಣೆ ಮಾಡಲಾಗಿದೆ. ನಂಬರ್ ಪ್ಲೇಟ್ ಅಳವಡಿಕೆಗೆ ಸಂಬಂಧಿಸಿದಂತೆ ಜೂನ್ 12ರಂದು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಕೋರ್ಟ್ ನೀಡಲಿರುವ ಸೂಚನೆಯಂತೆ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ” ಎಂದು ಹೇಳಿದರು.
ನಂಬರ್ ಪ್ಲೇಟ್ ಪಡೆಯಲು ಆನ್‌ಲೈನ್ ಮೂಲಕ ನೋಂದಣಿ ಮಾಡಬೇಕು. ಈಗಾಗಲೇ ಎರಡು ಬಾರಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಗಡುವು ವಿಸ್ತರಣೆ ಮಾಡಲಾಗಿತ್ತು. ಆದ್ದರಿಂದ ಈ ಬಾರಿ ಗಡುವು ವಿಸ್ತರಣೆ ಮಾಡುವ ಸಾಧ್ಯತೆ ಕಡಿಮೆ ಇದೆ.
ಸಾರಿಗೆ ಇಲಾಖೆಯ ಅಧಿಕಾರಿಗಳ ಮಾಹಿತಿ ಪ್ರಕಾರ ಇನ್ನೂ ಕೋಟ್ಯಾಂತರ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಕೆ ಬಾಕಿ ಇದೆ. ನಗರ ಪ್ರದೇಶದಲ್ಲಿ ನಂಬರ್ ಪ್ಲೇಟ್ ಹಾಕುವ ಕಾರ್ಯ ಚುರುಕಿನಿಂದ ಸಾಗುತ್ತಿದೆ. ಆದರೆ ತಾಲೂಕು, ಹೋಬಳಿ ಮಟ್ಟದಲ್ಲಿ ಹಲವು ವಾಹನಗಳಿಗೆ ಇನ್ನೂ ನಂಬರ್ ಪ್ಲೇಟ್ ಹಾಕಿಲ್ಲ.
ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸುವ ಕುರಿತಂತೆ ಇರುವ ಗೊಂದಲಗಳು ಬಗೆಹರಿದಿಲ್ಲ. ಅಂತರ್‌ಜಾಲದ ಕುರಿತು ಜ್ಞಾನವಿಲ್ಲದವರಿಗೆ ಈವರೆಗೂ ನೋಂದಣಿ ಮಾಡಲು ಸಾಧ್ಯವಾಗಿಲ್ಲ. ನಂಬರ್ ಪ್ಲೇಟ್ ಅಳವಡಿಸುವುದು ಕಡ್ಡಾಯ ಎಂದು ಆದೇಶ ಹೇಳಿದೆ. ಆದರೆ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಅಂತಿಮ ದಿನಾಂಕ ಪ್ರಸ್ತಾಪ ಮಾಡಿಲ್ಲ. ಆದರೆ, ರಾಜ್ಯ ಸರ್ಕಾರ ಗಡುವು ವಿಧಿಸಿದೆ. ಅದಕ್ಕೆ ಅವಕಾಶವಿಲ್ಲ ಎಂದು ಗೌರಿಶಂಕರ್ ಎಂಬುವವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಸಾರಿಗೆ ಇಲಾಖೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಕುರಿತು ಜನರ ಗೊಂದಲ ಬಗೆಹರಿಸಲು ಸಹಾಯವಾಣಿಯನ್ನು ಆರಂಭಿಸಿದೆ. ಜನರು 9449863429/26 ಸಂಖ್ಯೆಗೆ ಕರೆ ಮಾಡಬಹುದು. ಹೆಚ್‌ಎಸ್‌ಆರ್‌ಪಿ ನೋಂದಣಿಗೆ https://transport.karnataka.gov.in ಅಥವ www.siam.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.






