ಶಾಲೆಗೆ ಬಿಡಲು ಕರೆದೊಯ್ಯುತ್ತಿದ್ದ ವೇಳೆ ಮಾಬುಕಳದಲ್ಲಿ ಬಸ್‌ಗೆ ಸ್ಕೂಟಿ ಡಿಕ್ಕಿ: ತಂದೆ ಸಾವು, ಮಗ ಗಂಭೀರ
Views: 0
ಕನ್ನಡ ಕರಾವಳಿ ಸುದ್ದಿ:ಮಗನನ್ನು ಶಾಲೆಗೆ ಬಿಡಲು ಕರೆದೊಯ್ಯುತ್ತಿದ್ದ ವೇಳೆ ಸ್ಕೂಟಿಯೊಂದು ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿದ್ದು, ಸಹಸವಾರ ಪುತ್ರ ಗಂಭೀರ ಗಾಯಗೊಂಡ ಘಟನೆ ಶನಿವಾರ ಮಾಬುಕಳ ಬಸ್ ನಿಲ್ದಾಣದ ಬಳಿ ಸಂಭವಿಸಿದೆ.
ಸ್ಕೂಟಿ ಸವಾರ ರವಿರಾಜ್ (49) ಮೃತ ವ್ಯಕ್ತಿ. ಸಹಸವಾರನಾಗಿದ್ದ ಅವರ ಪುತ್ರ ಅನಿಲ್ ಗಂಭೀರವಾಗಿ ಗಾಯಗೊಂಡಿದ್ದು ಬ್ರಹ್ಮಾವರದ ಆಸ್ಪತ್ರೆಗೆ ದಾಖಲಿಸಲಾಗಿದೆ.ಮೃತರು ಪತ್ನಿ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ರವಿರಾಜ್ ಅವರು ಮೂಲತಹ ಕಿರಿಮಂಜೇಶ್ವರ ನಿವಾಸಿಯಾಗಿದ್ದು, ಪ್ರಸ್ತುತ ಮಟಪಾಡಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರ ಪುತ್ರ ಕೋಟದ ಖಾಸಗಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಯಾಗಿದ್ದು ಶಾಲೆಗೆ ಹೊರಡುವುದು ತಡವಾದ ಕಾರಣ ಸ್ಕೂಟಿಯಲ್ಲಿ ಮಗನನ್ನು ಶಾಲೆಗೆ ಬಿಡಲು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಬ್ರಹ್ಮಾವರದಿಂದ ಕುಂದಾಪುರ ಕಡೆಗೆ ಚಲಾಯಿಸುತ್ತಿದ್ದ ಬಸ್ಸು ಮಾಬುಕಳ ಬಸ್ ನಿಲ್ದಾಣದ ಬಳಿ ಮತ್ತೊಂದು ವಾಹನವನ್ನು ಹಿಂದಿಕ್ಕಿ ಬಳಿಕ ಮುನ್ಸೂಚನೆ ನೀಡದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಏಕಾಏಕಿ ನಿಲ್ಲಿಸಿದೆ ಎನ್ನಲಾಗಿದೆ. ಈ ವೇಳೆ ರವಿರಾಜ್ ಅವರು ಚಲಾಯಿಸುತ್ತಿದ್ದ ಸ್ಕೂಟಿ ಬಸ್‌ನ ಹಿಂಭಾಗದ ಬಲಬದಿಗೆ ಡಿಕ್ಕಿ ಹೊಡೆದು ಬಸ್ ನಡಿ ಬಿದ್ದಿದೆ. ಪರಿಣಾಮ ರವಿರಾಜ್ ಹಾಗೂ ಅನಿಲ್ ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆಗೆ ಬ್ರಹ್ಮಾವರ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರೀಕ್ಷಿಸಿದ ವೈದ್ಯರು ರವಿರಾಜ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






