ಇತರೆ

ಮನೆಯ ಬೆಡ್‌ರೂಂನಲ್ಲೇ 50 ಅಡಿ ಗುಂಡಿ ತೋಡಿ ನಿಧಿ ಶೋಧ..ಭಾರೀ ಕುತೂಹಲ..ರಹಸ್ಯ ಬಯಲು!

Views: 56

ಕನ್ನಡ ಕರಾವಳಿ ಸುದ್ದಿ: ನಿಧಿ ಸಿಗುತ್ತದೆ ಎಂಬ ಆಸೆಯಿಂದ ಮನೆಯೊಂದರೊಳಗೆ ಬೆಡ್ ರೂಮ್ ನಲ್ಲಿ ಬರೋಬ್ಬರಿ 50 ಅಡಿ ಆಳದ ಗುಂಡಿ ತೋಡಿದ ಪ್ರಕರಣ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್‌ನಲ್ಲಿ ಬೆಳಕಿಗೆ ಬಂದಿದೆ.

ನಿಧಿಶೋದಕ್ಕಾಗಿ ಬಿಹಾರದಿಂದ ಕಾರ್ಮಿಕರನ್ನು ಕರೆಸಿ, ಕಳೆದ ಒಂದೂವರೆ ತಿಂಗಳಿನಿಂದ ಮನೆಯ ಬೆಡ್‌ರೂಂನಲ್ಲೇ ರಹಸ್ಯವಾಗಿ ಗುಂಡಿ ತೋಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯ ಮಾಲೀಕರ ಸ್ವರ್ಣ ಪ್ರಕಾಶ್ ದಂಪತಿ ಸೇರಿದಂತೆ ಒಟ್ಟು 8 ಜನರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದ್ರೆ ಸ್ವರ್ಣ ಪ್ರಕಾಶ್ ಹಾಗೂ ನಾಗಬಿಂದು ನಾಪತ್ತೆಯಾಗಿದ್ದಾರೆ.

ಪೊಲೀಸ್ ಮಾಹಿತಿಯ ಪ್ರಕಾರ, ಸ್ವರ್ಣ ಪ್ರಕಾಶ್ ಹಾಗೂ ನಾಗಬಿಂದು ತಮ್ಮ ಮನೆಯಲ್ಲಿ ನಿಧಿ ಇದೆ ಎಂದು ಕಾರ್ಮಿಕರಿಗೆ ಹೇಳಿದ್ದರಂತೆ. ಸುಮಾರು 50 ಅಡಿ ಆಳಕ್ಕೆ ಅಗೆದರೆ ನಿಧಿ ಸಿಗುತ್ತದೆ ಎಂದು ನಂಬಿಸಿ, ಬಿಹಾರ ರಾಜ್ಯದ ಆರು ಮಂದಿ ಗೌಂಡಿಗಳನ್ನು ಗುಂಡಿ ತೋಡುವ ಕೆಲಸಕ್ಕೆ ಕರೆಸಿಕೊಂಡಿದ್ದರು. ಮನೆಯ ಮಾಲೀಕರು ಸುಮಾರು ಒಂದೂವರೆ ತಿಂಗಳ ಹಿಂದೆಯೇ ಮನೆ ಖಾಲಿ ಮಾಡಿ ಬೆಂಗಳೂರಿಗೆ ತೆರಳಿದ್ದು, ಮನೆಯ ಬೆಡ್‌ರೂಂನಲ್ಲಿ ಗುಂಡಿ ತೋಡುವಂತೆ ಕಾರ್ಮಿಕರಿಗೆ ಸೂಚಿಸಿದ್ದರು ಎನ್ನಲಾಗಿದೆ.

ಮನೆಯ ಮಾಲೀಕರ ಮಾತನ್ನು ನಂಬಿದ ಆರು ಮಂದಿ ಕಾರ್ಮಿಕರು ಕಳೆದ ಒಂದೂವರೆ ತಿಂಗಳಿನಿಂದ ರಾತ್ರಿಯ ವೇಳೆ ಯಾರಿಗೂ ಅನುಮಾನ ಬಾರದಂತೆ ಶಬ್ದ ಮಾಡದೆ ಗುಂಡಿ ಅಗೆಯಲಾಗುತ್ತಿತ್ತು. ಅಗೆದ ಮಣ್ಣನ್ನು ಹೊರಗೆ ಹಾಕಿದರೆ ವಿಷಯ ಬಯಲಾಗುವ ಸಾಧ್ಯತೆ ಇದ್ದುದರಿಂದ, ಮಣ್ಣನ್ನು ಮನೆಯೊಳಗೇ ಸುಮಾರು 25ಕ್ಕೂ ಹೆಚ್ಚು ಚೀಲಗಳಲ್ಲಿ ತುಂಬಿ ಸಂಗ್ರಹಿಸಿಡಲಾಗಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ವಡ್ಡರಹಟ್ಟಿ ಕ್ಯಾಂಪ್‌ನ ಅರುಣ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿಧಿಯ ಆಸೆಯಿಂದ ಮನೆಯೊಳಗೆ 50 ಅಡಿ ಆಳದ ಗುಂಡಿ ತೋಡಿರುವ ಪ್ರಕರಣ ಇದೀಗ ಸ್ಥಳೀಯವಾಗಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

Related Articles

Back to top button
error: Content is protected !!