ಪೂಜೆಯ ನೆಪದಲ್ಲಿ ಅರ್ಚಕನ ಕರೆದೊಯ್ದು ಕೊಲೆ ಪ್ರಕರಣ: ಮೂವರಿಗೆ ಜೀವಾವಧಿ ಶಿಕ್ಷೆ
Views: 20
ಕನ್ನಡ ಕರಾವಳಿ ಸುದ್ದಿ: ಕುಮಟಾ ಪಟ್ಟಣಕ್ಕೆ ಸಮೀಪದ ಕುಂಭೇಶ್ವರ ದೇವಸ್ಥಾನದ ಅರ್ಚಕ ವಿಶ್ವೇಶ್ವರ ಭಟ್ ಅವರ ಹತ್ಯೆಗೈದ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಇಲ್ಲಿನ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಮೃತ ವಿಶ್ವೇಶ್ವರ ಅವರ ಚಿಕ್ಕಪ್ಪ ನಾಗೇಶ ಭಟ್ ಅವರಿಗೆ ಸೇರಿದ ಆಸ್ತಿ ವಿಚಾರವಾಗಿ ಹತ್ಯೆ ನಡೆದಿತ್ತು. ಹತ್ಯೆಯಾದವರ ಸಂಬಂಧಿ ಕೂಜಳ್ಳಿ ಮೆಣಸಿನಕೆರೆಯ ಮಂಜುನಾಥ ಈಶ್ವರ ಹೆಗಡೆ ಹಾಗೂ ಶಿರಸಿ ತಾಲ್ಲೂಕು ಸೋಮನಹಳ್ಳಿಯ ಹರೀಶ ಸುಬ್ರಾಯ ಹೆಗಡೆ, ಸೊರಬ ತಾಲ್ಲೂಕು ಚಂದ್ರಗುತ್ತಿಯ ಧನಂಜಯ ಚಂದ್ರಶೇಖರ ನಾಯ್ಕ ಶಿಕ್ಷೆಗೆ ಒಳಗಾದ ಅಪರಾಧಿಗಳು. ಮೂವರಿಗೂ ದಂಡ ವಿಧಿಸಿದ್ದು, ದಂಡದ ಮೊತ್ತದಲ್ಲಿ ₹5 ಲಕ್ಷವನ್ನು ಪರಿಹಾರ ರೂಪದಲ್ಲಿ ಹತ್ಯೆಯಾದವರ ಪತ್ನಿಗೆ ನೀಡಲು ಕೋರ್ಟ್ ಆದೇಶಿಸಿದೆ.
2018ರ ಅಕ್ಟೋಬರ್ ತಿಂಗಳಲ್ಲಿ ಅರ್ಚಕ ವಿಶ್ವೇಶ್ವರ ಅವರನ್ನು ಜಮೀನಿನ ಪೂಜೆಯೊಂದಕ್ಕೆ ಕರೆಸಿ, ಹತ್ಯೆ ಮಾಡಿದ್ದ ಅಪರಾಧಿಗಳು ಶವವನ್ನು ಅಲ್ಲಿಯೇ ಹೂತಿದ್ದರು. ಎರಡು ದಿನಗಳ ನಂತರ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳು, ಹಲವು ಸಾಂದರ್ಭಿಕ ಸಾಕ್ಷ್ಯಗಳು ಸೇರಿದಂತೆ 62 ಸಾಕ್ಷಿಗಳನ್ನು ಪರಿಗಣಿಸಿದ್ದ ಜಿಲ್ಲಾ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಬಿ. ಅವರು ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಪ್ರಕಟಿಸಿ, ಆದೇಶಿಸಿದರು.
ಕುಮಟಾ ಠಾಣೆಯ ಇನ್‌ಸ್ಪೆಕ್ಟರ್ ಸಂತೋಷ ಶೆಟ್ಟಿ ತನಿಖೆ ನಡೆಸಿ, ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕಿ ತನುಕಾ ಹೊಸ ಪಟ್ಟಣ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.






