ಉಡುಪಿ ಮೂಲದ ದಿಶಾ ಸಾಲಿಯಾನ್ ನಿಗೂಢ ಸಾವು ಪ್ರಕರಣ: ಸಿಬಿಐ ತನಿಖೆಗೆ ಕೋರ್ಟ್ ಆದೇಶ
Views: 61
ಕನ್ನಡ ಕರಾವಳಿ ಸುದ್ದಿ: ಉಡುಪಿ ಮೂಲದ ದಿಶಾ ಸಾಲ್ಯಾನ್ ಸಾವಿನ ಪ್ರಕರಣದ ಕುರಿತು ಬುಧವಾರ ತನ್ನ ತೀರ್ಪು ಪ್ರಕಟಿಸಿದ ಬಾಂಬೆ ಹೈಕೋರ್ಟ್, ಜೂನ್ 8, 2020ರಂದು ಮುಂಬೈನ ಮಲದ್ ಕಟ್ಟಡದಲ್ಲಿ ಸಂಭವಿಸಿದ್ದ ಆಕೆಯ ಸಾವಿನ ಕುರಿತು ಎಫ್‌ಐಆರ್ ದಾಖಲಿಸಿಕೊಳ್ಳುವಂತೆ ನಿರ್ದೇಶನ ನೀಡಿದೆ.
ಈ ಕುರಿತು ತನಿಖೆ ನಡೆಸಲು ಸಿಬಿಐನ ಹಿರಿಯ ಅಧಿಕಾರಿಯೊಬ್ಬರನ್ನು ಬಾಂಬೆ ಹೈಕೋರ್ಟ್ ನೇಮಕ ಮಾಡಿದೆ. ಇದೇ ವೇಳೆ, ಆರೋಪಿಗಳ ವಿರುದ್ಧ ಸೂಕ್ತ ಸಾಕ್ಷ್ಯಾಧಾರ ದೊರೆಯುವವರೆಗೂ, ಯಾವುದೇ ಆರೋಪಿಯ ಹೆಸರನ್ನು ಎಫ್‌ಐಆರ್ ನಲ್ಲಿ ಉಲ್ಲೇಖಿಸಬಾರದು ಎಂದೂ ನ್ಯಾಯಾಲಯ ಸೂಚನೆ ನೀಡಿದೆ.
ದಿಶಾ ಸಾಲ್ಯಾನ್ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮ್ಯಾನೇಜರ್ ಆಗಿದ್ದರು.ತಮ್ಮ ಪುತ್ರಿಯ ಸಾವು ಅನುಮಾನಾಸ್ಪದವಾಗಿರುವುದರಿಂದ, ಆಕೆಯ ಸಾವನ್ನು ಕೊಲೆ ಎಂದು ಪರಿಗಣಿಸಿ, ಈ ಕುರಿತು ತನಿಖೆ ಕೈಗೊಳ್ಳಬೇಕು ಎಂದು ದಿಶಾ ಸಾಲ್ಯಾನ್ ರ ತಂದೆ ಸತೀಶ್ ಸಾಲ್ಯಾನ್ ಅವರು ತಮ್ಮ ವಕೀಲ ನಿತೇಶ್ ಓಝಾ ಮೂಲಕ ನ್ಯಾಯಾಲಯದೆದುರು ವಾದ ಮಂಡಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ್ದ ನ್ಯಾ. ಎಸ್.ವಿ.ಕೊತ್ವಾಲ್ ಹಾಗೂ ಆರ್.ಆರ್.ಭೋಂಸ್ಥೆ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ಶುಕ್ರವಾರ ತೀರ್ಪನ್ನು ಕಾಯ್ದಿರಿಸಿತ್ತು.
ತಮ್ಮ ಪುತ್ರಿಯ ಸಾವಿನ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದ ಸತೀಶ್ ಸಾಲ್ಯಾನ್, ಹೈಕೋರ್ಟ್ ಈ ಸಂಬಂಧ ಎಫ್‌ಐಆರ್ ದಾಖಲಿಸಿಕೊಳ್ಳುವಂತೆ ಸೂಚಿಸುವ ಅಧಿಕಾರ ಹೊಂದಿದೆ ಎಂದು ವಾದಿಸಿದ್ದರು. ಅಲ್ಲದೆ, ತಮ್ಮ ಕುಟುಂಬಕ್ಕೆ ಸಂಪೂರ್ಣ ನ್ಯಾಯ ಒದಗಿಸುವುದನ್ನು ಖಾತರಿಗೊಳಿಸಬೇಕು ಎಂದು ಅವರು ಕೋರಿದ್ದರು.
ಬುಧವಾರ ಈ ಪ್ರಕರಣದ ಕುರಿತು ತೀರ್ಪು ಪ್ರಕಟಿಸಿದ ಹೈಕೋರ್ಟ್, ಈ ಪ್ರಕರಣದ ತನಿಖೆ ನಡೆಸಲು ಹಾಗೂ ಎಫ್‌ಐಆರ್ ದಾಖಲಿಸಲು ಹಿರಿಯ ಸಿಬಿಐ ಅಧಿಕಾರಿಯನ್ನು ನೇಮಿಸಲಾಗಿದೆ. ಆದರೆ, ಸಕಾರಣ ಸಂಶಯ ವ್ಯಕ್ತವಾಗುವವರೆಗೂ ಯಾರನ್ನೂ ವಶಕ್ಕೆ ಪಡೆಯಬಾರದು. ಒಂದು ವೇಳೆ ಏನೂ ಪತ್ತೆಯಾಗದಿದ್ದರೆ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ ಹಾಗೂ ಸಾರಾಂಶ ವರದಿಯನ್ನು ನ್ಯಾಯಾಲಕ್ಕೆ ಸಲ್ಲಿಸಬೇಕು” ಎಂದು ಸೂಚಿಸಿತು.
ಅತ್ಯಾಚಾರ, ಹತ್ಯೆ ಮತ್ತು ರಾಜಕೀಯ ಪ್ರಭಾವದ ಆರೋಪ
ಸತೀಶ್ ಸಾಲಿಯಾನ್ ಅವರು ತಮ್ಮ ಅರ್ಜಿಯಲ್ಲಿ ದಿಶಾ ಅವರ ಸಾವು ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಸಂಭವಿಸಿದೆ ಎಂದು ಆರೋಪಿಸಿದ್ದರು. ದಿಶಾ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗಿದ್ದಾರೆ ಹಾಗೂ ನಂತರ ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲು ರಾಜಕೀಯವಾಗಿ ಪ್ರಕರಣವನ್ನು ಮುಚ್ಚಿಹಾಕಲಾಗಿದೆ ಎಂಬುದು ಅವರ ಪ್ರಮುಖ ಆರೋಪವಾಗಿತ್ತು.






