ಪ್ರವಾಹದ ಹೊಡೆತಕ್ಕೆ ಒಂದೇ ಮನೆಯಲ್ಲಿ ಹೂತು ಹೋಗಿರುವ ಸ್ಥಿತಿಯಲ್ಲಿ 23 ಶವಗಳು ಪತ್ತೆ
Views: 82
ಕನ್ನಡ ಕರಾವಳಿ ಸುದ್ದಿ: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಈವರೆಗೆ 1003 ಜನರು ಮೃತಪಟ್ಟಿದ್ದು, ನಾಲ್ಕು ಸಾವಿರಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಕಣ್ಮರೆಯಾಗಿರುವವರಿಗಾಗಿ ರಕ್ಷಣಾ ತಂಡ ಶೋಧಕಾರ್ಯ ಮುಂದುವರೆಸಿದೆ.
ಪ್ರವಾಹದ ಬೆನ್ನಲ್ಲೇ ನೇಪಾಳದಲ್ಲಿ ಭಾರಿ ಭೂಕುಸಿತ ಸಂಭವಿಸುತ್ತಿದ್ದು, ಇಡೀ ನೇಪಾಳ ನರಕ ಸದೃಶವಾಗಿದೆ. ಪ್ರವಾಹದ ಹೊಡೆತಕ್ಕೆ ಒಂದೇ ಮನೆಯಲ್ಲಿ ಹೂತುಹೋಗಿರುವ ಸ್ಥಿತಿಯಲ್ಲಿ 23 ಶವಗಳು ಪತ್ತೆಯಾಗಿದ್ದು, ಜಲಪ್ರಳಯದ ಭೀಕರತೆಯನ್ನು ಸಾರಿ ಹೇಳುತ್ತಿದೆ.
ನುವಾಕೋಟ್ ಜಿಲ್ಲೆಯ ಬೆತ್ರಾವತಿ ಗ್ರಾಮದಲ್ಲಿ ಒಂದೇ ಮನೆಯೊಳಗೆ ಹೂತುಹೋಗಿದ್ದ 23 ಮೃತದೇಹಗಳು ಪತ್ತೆಯಾಗಿವೆ. ಭೋಟೆಕೋಶಿ ಮತ್ತು ತ್ರಿಶೂಲಿ ನದಿಗಳ ರೌದ್ರಾವತಾರಕ್ಕೆ ಸಿಲುಕಿದ ಬೆತ್ರಾವತಿಯ ಮೂರು ಅಂತಸ್ತಿನ ಮನೆಯೊಂದರ ಕೊಠಡಿಯೊಳಗೆ 21 ಹಾಗೂ ಹೊರಗೆ 2 ಮೃತದೇಹಗಳು ಪತ್ತೆಯಾಗಿವೆ.

ಇವರಲ್ಲಿ ವಿದೇಶಿ ಪ್ರಜೆಗಳು ಹಾಗೂ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗೋಸಾಯಿಕುಂಡಕ್ಕೆ ತೆರಳುತ್ತಿದ್ದ ಯಾತ್ರಿಕರು ಇರಬಹುದು ಎಂದು ಶಂಕಿಸಲಾಗಿದೆ. ಪ್ರವಾಹದ ನೀರು ನುಗ್ಗಿದಾಗ ತಪ್ಪಿಸಿಕೊಳ್ಳಲು ಸಂತ್ರಸ್ತರು ಯತ್ನಿಸಿದ್ದಾರೆ. ಆದರೆ ಭಾರಿ ಪ್ರಮಾಣದ ಮಣ್ಣು ನೀರು ಇಡೀ ಕಟ್ಟಡವನ್ನೇ ಆಪೋಷನ ತೆಗೆದುಕೊಂಡಿದೆ. ಯುವತಿಯೊಬ್ಬಳನ್ನು ತಾಯಿ ಗಟ್ಟಿಯಾಗಿ ತಬ್ಬಿಕೊಂಡ ಸ್ಥಿತಿಯಲ್ಲೇ ಇಬ್ಬರ ಶವಗಳು ಪತ್ತೆಯಾಗಿವೆ ಎಂದು ರಕ್ಷಣಾ ತಂಡ ತಿಳಿಸಿದೆ.






