ಮಮತಾ ಬ್ಯಾನರ್ಜಿ ಸೊಸೆ ಶವವಾಗಿ ಪತ್ತೆ, ಸಾವಿನ ಸುತ್ತ ಅನುಮಾನ!
Views: 20
ಕನ್ನಡ ಕರಾವಳಿ ಸುದ್ದಿ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹೋದರ ಸೊಸೆ, ಬ್ರಿಸ್ಟಿ ಮುಖರ್ಜಿ ತಮ್ಮ ಸ್ವಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದಾರೆಂದು ವರದಿಯಾಗಿದೆ. ಬ್ರಿದುಂ ಜಿಲ್ಲೆಯಲ್ಲಿರುವ ಮನೆಯಲ್ಲಿ ಬ್ರಿಸ್ಟಿ ಮಧ್ಯಾಹ್ನದ ಹೊತ್ತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಕಂಡುಬಂದಿದ್ದಾರೆಂದು ಹೇಳಲಾಗುತ್ತಿದೆ.
ಶವವಾಗಿ ಪತ್ತೆಯಾಗಿರುವ ಬ್ರಿಸ್ಟಿ ಮುಖರ್ಜಿ ಮಾಜಿ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಹತ್ತಿರದ ಸಂಬಂಧಿಯಾಗಿದ್ದು, ಮೃತಳ ತಂದೆ ನಿಹಾರ್ ಮುಖರ್ಜಿ ತೃಣಮೂಲ ಕಾಂಗ್ರೆಸ್ನ ಬ್ಲಾಕ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದರೆ. ಮೃತ ಬ್ರಿಷ್ಟಿ ಸಿ ದರ್ಜೆಯ ಸರ್ಕಾರಿ ನೌಕರಳಾಗಿ ಕೆಲಸ ಮಾಡುತ್ತಿದ್ದಳೆಂದು ತಿಳಿದು ಬಂದಿದೆ.
ಮಾಹಿತಿ ಪ್ರಕಾರ, ಬ್ರಿಷ್ಟಿ ಕೆಲ ವರ್ಷಗಳ ಹಿಂದೆ ಸರ್ಕಾರಿ ನೌಕರಿಯೊಂದನ್ನು ಪಡೆದುಕೊಂಡಿದ್ದಳು. ಆದರೆ, ಈ ಪರೀಕ್ಷೆಯಲ್ಲಿ ಅಕ್ರಮವಾದ ಕಾರಣ ಸುಪ್ರೀಂ ಕೋರ್ಟ್ ಈ ನೇಮಕಾತಿಯನ್ನು ರದ್ದು ಪಡಿಸಿತ್ತು. ಆದ್ದರಿಂದ ಬ್ರಿಷ್ಟಿ ತನ್ನ ಕೆಲಸವನ್ನು ಕಳೆದುಕೊಂಡಿದ್ದಳು. ಹೀಗಾಗಿ ಈಕೆ ಖಿನ್ನತೆಗೆ ಗುರಿಯಾಗಿದ್ದು, ಮನೋವೈದ್ಯರ ಬಳಿ ಚಿಕಿತ್ಸೆಯನ್ನು ಕೂಡ ಪಡೆಯುತ್ತಿದ್ದಳೆಂದು ತಿಳಿದು ಬಂದಿದೆ. ಹಾಗೆಯೇ ಈಕೆಯ ವೈವಾಹಿಕ ಜೀವನದಲ್ಲಿ ಕೂಡ ಏರುಪೇರು ಕಂಡುಬಂದಿದ್ದು, ಪತಿಯಿಂದ ವಿಚ್ಛೇದನ ಪಡೆಯಲು ಬ್ರಿಷ್ಟಿ ಮುಂದಾಗಿದ್ದು, ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿತ್ತು ಎಂದು ತಿಳಿದು ಬಂದಿದೆ.
ಪೊಲೀಸರಿಂದ ಮುಂದುವರಿದ ತನಿಖೆ!
ಸದ್ಯ ಬ್ರಿಷ್ಟಿಯ ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕರೆದೊಯ್ಯಲಾಗಿದ್ದು, ಪರೀಕ್ಷೆ ನಂತರ ವೈದ್ಯಕೀಯ ವರದಿ ಹೊರಬೀಳಬೇಕಿದೆ. ವೈಯಕ್ತಿಕ ತೊಂದರೆಯಿಂದ ಬ್ರಿಷ್ಟಿ ಬಳಲುತ್ತಿದ್ದ ಹಿನ್ನಲೆ ಪೊಲೀಸರು ಈ ಪ್ರಕರಣವನ್ನು ಆತ್ಮಹತ್ಯೆ ಜೊತೆಗೆ ಕೊಲೆ ಆಯಾಮದಲ್ಲಿ ಕೂಡ ವಿಚಾರಣೆ ನಡೆಸುತ್ತಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ.






