ನ್ಯಾಯಾಲಯಕ್ಕೆ ಹಾಜರಾಗದೆ ಕೆರೆಯಲ್ಲಿ ಮುಳುಗಿ ಅವಿತಿದ್ದ ಕಳ್ಳನನ್ನು ಸೆರೆಹಿಡಿದ ಪೊಲೀಸರು!
Views: 22
ಕನ್ನಡ ಕರಾವಳಿ ಸುದ್ದಿ: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ ಆರೋಪಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆರೆಯಲ್ಲಿ ಮುಳುಗಿ ಅವಿತಿದ್ದ ವಿಚಿತ್ರ ಘಟನೆ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ. ಕೆರೆಗೆ ಇಳಿದ ಪೊಲೀಸರು ಕಳ್ಳನನ್ನು ಸೆರೆ ಹಿಡಿದಿದ್ದಾರೆ.
ಭದ್ರಾವತಿ ಪಟ್ಟಣ ಸೇರಿದಂತೆ ವಿವಿಧ ಪೊಲೀಸ್ ಠಾಣೆಯಲ್ಲಿ ಸುಮಾರು 16 ಪ್ರಕರಣಗಳಲ್ಲಿ ಬೇಕಾಗಿದ್ದ ದಿಲೀಪ್ ಅಲಿಯಾಸ್ ಕರಿಯ ಜಾಮೀನು ಪಡೆದು ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದನು. ಈತನನ್ನು ಹಿಡಿದು ತರುವಂತೆ ನ್ಯಾಯಾಲಯ ಆದೇಶ ನೀಡಿದ್ದರಿಂದ ಭದ್ರಾವತಿ ನ್ಯೂ ಟೌನ್ ಪೊಲೀಸರು ಕಾರ್ಯಾಚರಣೆ ನಡೆಸಿ, ಕರಿಯನನ್ನು ಹಿಡಿಯಲು ಹೋದಾಗ ಆತ ತಪ್ಪಿಸಿಕೊಂಡು ಕೆರೆಯಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ನೀರಿನಲ್ಲಿಯೇ ಅಡಗಿ ಕುಳಿತುಕೊಂಡಿದ್ದ.
ಕಳ್ಳ ನೀರಿನಲ್ಲಿ ಬೆಳೆಯುವ ಹಸಿರು ಹುಲ್ಲಿನ ಅಡಿಯಲ್ಲಿ ಅಡಗಿ ಕುಳಿತುಕೊಂಡಿದ್ದ. ಈತ ನೀರಿನಿಂದ ಹೊರಗೆ ಬರುತ್ತಾನೆಂದು ಪೊಲೀಸರು ಕಾದು ಕುಳಿತಿದ್ದರು. ಆದರೆ ಅರ್ಧ ಗಂಟೆಯಾದರೂ ಹೊರಗೆ ಬಾರದ ಕಾರಣದಿಂದ ನ್ಯೂ ಟೌನ್ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಸಿ.ಹೆಚ್.ಸಿ. ಗಂಗಾಧರ ಮತ್ತು ಹಾಲಪ್ಪ ತಮ್ಮ ಜೀವದ ಹಂಗು ತೊರೆದು ಕೆರೆಗಿಳಿದು ಕರಿಯನನ್ನು ಮೇಲಕ್ಕೆ ಕರೆ ತಂದಿದ್ದಾರೆ.






