ಗಂಡ ನೈಟ್ ಡ್ಯೂಟಿಯಿಂದ ಮಧ್ಯರಾತ್ರಿ ಮನೆಗೆ ಬಂದಾಗ ಹೆಂಡತಿ ಪ್ರಿಯಕರೊಂದಿಗೆ ಚಕ್ಕಂದ.. ಗಂಡ ಹೆಂಡತಿ ಜಗಳದಲ್ಲಿ ದುರಂತ ಅಂತ್ಯ?
Views: 0
ಕನ್ನಡ ಕರಾವಳಿ ಸುದ್ದಿ: ಎನ್ಸಿಎಲ್ ಸಂಸ್ಥೆಯಲ್ಲಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ರಮಾ ಶಂಕರ್ ಮಿಶ್ರಾ ಎಂಬವರನ್ನು ಅವರ ಪತ್ನಿ ಪ್ರಿಯಾಂಕಾ ಮಿಶ್ರಾ ಹಾಗೂ ಆಕೆಯ ಪ್ರಿಯಕರ ಸೇರಿ ಅತ್ಯಂತ ಭೀಕರವಾಗಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಎಂಜಿನಿಯರ್ ರಮಾ ಶಂಕರ್ ಮಿಶ್ರಾ ಅವರಿಗೆ ಎನ್ಸಿಎಲ್ನಲ್ಲಿ ನೈಟ್ ಡ್ಯೂಟಿ ಇರುತ್ತಿತ್ತು. ಗಂಡ ಕೆಲಸಕ್ಕೆ ತೆರಳಿದ ತಕ್ಷಣ, ಪತ್ನಿ ಪ್ರಿಯಾಂಕಾ ತನ್ನ ಇಬ್ಬರು ಹೆಣ್ಣುಮಕ್ಕಳಿಗೆ ನಿದ್ರೆ ಮಾತ್ರೆ ನೀಡಿ ಮಲಗಿಸಿ, ಬಳಿಕ ಪ್ರಿಯಕರನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು ಎಂದು ಆರೋಪಿಸಲಾಗಿದೆ.
ಘಟನೆ ನಡೆದ ರಾತ್ರಿ ರಮಾ ಶಂಕರ್ ಅವರು ಪ್ರಮುಖ ಫೈಲ್ ಒಂದನ್ನು ಮನೆಯಲ್ಲೇ ಮರೆತು ಡ್ಯೂಟಿಗೆ ತೆರಳಿದ್ದರು. ಫೈಲ್ ಕೊಂಡೊಯ್ಯಲು ಮಧ್ಯರಾತ್ರಿ ಮನೆಗೆ ವಾಪಸ್ ಬಂದಾಗ, ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಅನುಮಾನಗೊಂಡು ತಮ್ಮ ಬಳಿಯಿದ್ದ ಹೆಚ್ಚುವರಿ (ಸ್ಪೇರ್) ಕೀ ಬಳಸಿ ಬಾಗಿಲು ತೆಗೆದು ಒಳಗೆ ಹೋದಾಗ, ಪತ್ನಿ ಪ್ರಿಯಾಂಕಾ ಪ್ರಿಯಕರನೊಂದಿಗೆ ಅಸಭ್ಯ ಸ್ಥಿತಿಯಲ್ಲಿರುವುದು ಕಂಡುಬಂದಿದೆ.
ಈ ವಿಷಯವಾಗಿ ಗಂಡ-ಹೆಂಡತಿಯ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಈ ವೇಳೆ ಆಕ್ರೋಶಗೊಂಡ ಪತ್ನಿ ಪ್ರಿಯಾಂಕಾ, ಪ್ರೆಶರ್ ಕುಕ್ಕರ್ನಿಂದ ಗಂಡನ ತಲೆಗೆ ಬಲವಾಗಿ ಹೊಡೆದಿದ್ದಾಳೆ. ರಮಾ ಶಂಕರ್ ರಕ್ತದ ಮಡುವಿನಲ್ಲಿ ಕೆಳಗೆ ಬಿದ್ದ ತಕ್ಷಣ, ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ರಸ್ತೆಬದಿಯಲ್ಲಿ ಎಸೆದು ಪರಾರಿಯಾಗಿದ್ದರು.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕಾಲ್ ಡಿಟೇಲ್ಸ್ ಹಾಗೂ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಆಧರಿಸಿ ತನಿಖೆ ಚುರುಕುಗೊಳಿಸಿದರು. ಪೋಲಿಸರ ಸುದೀರ್ಘ ವಿಚಾರಣೆಯ ನಂತರ ಅಸಲಿ ಸತ್ಯ ಬಯಲಾಗಿದ್ದು, ಕೊಲೆಗೆ ಸಂಚು ರೂಪಿಸಿದ ಪತ್ನಿ, ಆಕೆಯ ಪ್ರಿಯಕರ ಹಾಗೂ ಈ ಕೃತ್ಯಕ್ಕೆ ಸಹಕರಿಸಿದ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.ಪವಿತ್ರವಾದ ಪ್ರೀತಿ ಮತ್ತು ನಂಬಿಕೆಯ ಹೆಸರಿನಲ್ಲಿ ನಡೆದ ಈ ವಂಚನೆ ಹಾಗೂ ಹತ್ಯೆ, ಸಮಾಜದಲ್ಲಿ ನಂಬಿಕೆ ಮತ್ತು ಮಾನವೀಯತೆ ಎಷ್ಟರಮಟ್ಟಿಗೆ ಕುಸಿಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.






