ಯುವಜನ

ಕಾಲೇಜಿನಲ್ಲಿ ವಿದ್ಯಾರ್ಥಿನಿ ವಿಚಾರಕ್ಕೆ ಯುವಕನ ಕೊಲೆ:  ಅಪ್ರಾಪ್ತರ ಸಹಿತ ನಾಲ್ವರ ಸೆರೆ

Views: 16

ಕನ್ನಡ ಕರಾವಳಿ ಸುದ್ದಿ: ಬೆಂಗಳೂರು ನಾಗರಭಾವಿಯಲ್ಲಿ ನಡೆದಿದ್ದ ಬಿ.ಕಾಂ ವಿದ್ಯಾರ್ಥಿ ಯೋಗೇಶ್ (19) ಹತ್ಯೆ ಪ್ರಕರಣದಲ್ಲಿ ಮೂವರು ಅಪ್ರಾಪ್ತರು ಸೇರಿದಂತೆ ನಾಲ್ವರು ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸೀನಿಯರ್ ವಿದ್ಯಾರ್ಥಿನಿಯೊಬ್ಬಳ ವಿಚಾರವಾಗಿ ನಡೆದ ಕ್ಷುಲ್ಲಕ ಜಗಳ ಹತ್ಯೆಯಲ್ಲಿ ಅಂತ್ಯವಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದು, ಪ್ರಮುಖ ಆರೋಪಿ ಭುವನ್‌ ಬಂಧನಕ್ಕಾಗಿ ತೀವ್ರ ಶೋಧ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನಾಗರಬಾವಿಯ ಮುದ್ದಿನಪಾಳ್ಯ ರಸ್ತೆಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ಯೋಗೇಶ್ ಹಾಗೂ ಭುವನ್ ಪ್ರಥಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದರು. ಆರೋಪಿ ಭುವನ್ ಅದೇ ಕಾಲೇಜಿನ ಸೀನಿಯರ್ ವಿದ್ಯಾರ್ಥಿನಿಯೊಬ್ಬಳನ್ನು ತಾನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡು ಅಡ್ಡಾಡುತ್ತಿದ್ದ. ಆದರೆ, ಆ ಯುವತಿ ಭುವನ್ ಪ್ರೀತಿ ತಿರಸ್ಕರಿಸಿದ್ದಳು.

ಈ ನಡುವೆ ಯೋಗೇಶ್ ಆ ಯುವತಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಎನ್ನಲಾಗಿದ್ದು, ಅದೇ ವಿಚಾರವಾಗಿ ಭುವನ್ ಕೋಪಗೊಂಡಿದ್ದ. ಸೆ. 30ರಂದು ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ಯೋಗೇಶ್ ಗೆ ಕರೆ ಮಾಡಿದ್ದ ಆರೋಪಿ ಭುವನ್ ಕಾಲೇಜಿನ ಹಿಂಭಾಗದ ರಸ್ತೆಯಲ್ಲಿರುವ ಜಿಮ್ ಬಳಿ ಬರುವಂತೆ ತಿಳಿಸಿದ್ದ. ಯೋಗೇಶ್ ಸ್ಥಳಕ್ಕೆ ತಲುಪುತ್ತಿದ್ದಂತೆ ಭುವನ್ ಮತ್ತವನ ಗ್ಯಾಂಗ್ ಜಗಳ ತೆಗೆದಿತ್ತು. ಮಾತುಕತೆ ವಿಕೋಪಕ್ಕೆ ತಿರುಗಿ ಭುವನ್ ಹಾಗೂ ಆತನ ಸಹಚರರು ಯೋಗೇಶ್ ಎದೆಯ ಭಾಗಕ್ಕೆ ಚಾಕುವಿನಿಂದ ಭೀಕರವಾಗಿ ಇರಿದು ಸ್ಥಳದಿಂದ ಕಾಲ್ಕಿತ್ತಿದ್ದರು. ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಯೋಗೇಶನ್ನನ್ನು ತಕ್ಷಣವೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ, ಚಿಕಿತ್ಸೆ ಫಲಿಸದೇ ಮಾರ್ಗಮಧ್ಯದಲ್ಲೇ ಆತ ಸಾವನ್ನಪ್ಪಿದ್ದ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಭುವನ್ ಬಂಧನಕ್ಕಾಗಿ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

Related Articles

Back to top button
error: Content is protected !!