ಇತರೆ

ಗಂಡ -ಹೆಂಡತಿ ಜಗಳ:ನ್ಯಾಯಾಧೀಶರ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಸ್ಥಿತಿ ಗಂಭೀರ

Views: 73

ಕನ್ನಡ ಕರಾವಳಿ ಸುದ್ದಿ:ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಏಕಾಏಕಿ ಒಳ ನುಗ್ಗಿದ ವ್ಯಕ್ತಿಯೋರ್ವ ನ್ಯಾಯಾಧೀಶರ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪುತ್ತೂರಿನ 5ನೇ ಹೆಚ್ಚುವರಿ ನ್ಯಾಯಾಲಯದ ಆವರಣದಲ್ಲಿ  ಮಂಗಳವಾರ ನಡೆದಿದೆ.

ಪುತ್ತೂರು ತಾಲೂಕಿನ ಕಾವು ಮಣಿಯಡ್ಕ ನಿವಾಸಿ ರವಿ (35) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ರವಿ ಹಾಗೂ ಆತನ ಪತ್ನಿ ವಿದ್ಯಾಶ್ರೀ ನಡುವೆ ದಾಂಪತ್ಯ ಕಲಹ ಉಂಟಾಗಿದ್ದು, ಎರಡು ದಿನಗಳ ಹಿಂದೆ ವಿದ್ಯಾಶ್ರೀ ಅವರ ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿದ್ದ ಆರೋಪವೂ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಗಂಡ–ಹೆಂಡತಿ ಜಗಳ ಪೊಲೀಸ್ ಠಾಣೆ ಮಟ್ಟಿಗೆ ಹೋಗಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ಇತ್ತು.

ಇದೇ ಕಾರಣದಿಂದ ಇಬ್ಬರ ನಡುವೆ ವಿಚ್ಛೇದನದ ಮಾತುಕತೆ ನಡೆಯುತ್ತಿದ್ದು, ಠಾಣೆಗೆ ಹಾಜರಾಗುವಂತೆ ಪೊಲೀಸರಿಂದ ರವಿಗೆ ಸೂಚನೆ ನೀಡಲಾಗಿತ್ತು. ಈ ನಡುವೆ ರವಿ ನೇರವಾಗಿ ಪುತ್ತೂರು ನ್ಯಾಯಾಲಯದ ಆವರಣಕ್ಕೆ ಆಗಮಿಸಿ, ನ್ಯಾಯಾಧೀಶರ ಎದುರೇ ವಿಷ ಸೇವಿಸಿದ್ದಾನೆ.

ಘಟನೆಗೆ ಮೊದಲು ವ್ಯಕ್ತಿಯೋರ್ವ ವಿಷ ಸೇವನೆ ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ನ್ಯಾಯಾಧೀಶರು ಅಲ್ಲಿನ ಸಿಬ್ಬಂದಿಗೆ ಮುಂಚಿತವಾಗಿಯೇ ತಿಳಿಸಿದ್ದಾರೆ ಎನ್ನಲಾಗಿದೆ. ವಿಷ ಸೇವಿಸಿದ ಬಳಿಕ ರವಿ ನ್ಯಾಯಾಲಯದ ಆವರಣದಲ್ಲೇ ವಾಂತಿ ಮಾಡಿದ್ದಾನೆ. ತಕ್ಷಣ ಎಚ್ಚೆತ್ತುಕೊಂಡ ನ್ಯಾಯಾಲಯದ ಸಿಬ್ಬಂದಿ ಹಾಗೂ ಸಾರ್ವಜನಿಕರು ಆತನನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.

ಗೇರು ತೋಟದಲ್ಲಿ ಸಿಂಪಡಿಸುವ ಕೀಟನಾಶಕವನ್ನು ರವಿ ಸೇವಿಸಿದ್ದಾನೆ ಎಂದು ತಿಳಿದುಬಂದಿದೆ. ವಿಷ ಸೇವನೆಯಿಂದ ಆತನ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನಿಂದ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.

 

 

 

Related Articles

Back to top button
error: Content is protected !!