ಕೊಟ್ಟ ಮಾತಿನಂತೆ ನೀರುಪಾಲಾಗಿದ್ದ ನಾಲ್ವರ ಶವ ಹುಡುಕಿ ಕೊಟ್ಟ ಮುಳುಗು ತಜ್ಜ ಈಶ್ವರ್ ಮಲ್ಪೆ
Views: 164
ಕನ್ನಡ ಕರಾವಳಿ ಸುದ್ದಿ: ಒಂದೇ ಕುಟುಂಬದ ನಾಲ್ವರು ನೀರುಪಾಲು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಾಲ್ಕನೇ ದಿನದ ಕಾರ್ಯಾಚರಣೆಯಲ್ಲಿ ಮುಳುಗು ತಜ್ಞ ಈಶ್ವರ್ ಮಲ್ಪೆ ಮೃತದೇಹಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ನೀರಿನ ರಭಸದಿಂದಾಗಿ ಶೋಧ ಕಾರ್ಯಚರಣೆಗೆ ಅಡ್ಡಿ ಉಂಟಾಗಿತ್ತು. ಆದರೆ ಅದರ ನಡುವೆಯೂ ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೃತದೇಹಗಳನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಮೃತದೇಹಗಳನ್ನು ಹುಡುಕಿ ಕೊಡುತ್ತೇನೆ ಎಂಬ ತಮ್ಮ ಮಾತನ್ನು ಈಶ್ವರ್ ಮಲ್ಪೆ ಉಳಿಸಿಕೊಂಡಿದ್ದಾರೆ. ಸದ್ಯ ಅವರ ಕಾರ್ಯಕ್ಕೆ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪ್ನ ಭದ್ರಾ ನಾಲೆಯಲ್ಲಿ ಒಂದೇ ಕುಟುಂಬದ ನಾಲ್ವರು ನೀರು ಪಾಲಾಗಿದ್ದರು. ಕಳೆದ ನಾಲ್ಕು ದಿನಗಳಿಂದ ಈಶ್ವರ್ ಮಲ್ಪೆ ಮೃತದೇಹ ಶೋಧ ಕಾರ್ಯಾಚರಣೆ ನಡೆಸಿದ್ದರು. ಭದ್ರಾ ನಾಲೆಯಲ್ಲಿ ನೀರು ಹರಿವು ಜಾಸ್ತಿ ಹಿನ್ನೆಲೆ ಕಾರ್ಯಾಚರಣೆಗೆ ಸಾಕಷ್ಟು ತೊಡಕು ಉಂಟಾಗಿತ್ತು. ಈ ಹಿನ್ನಲೆ ಶವ ಶೋಧ ಕಾರ್ಯಾಚರಣೆ ವಿಳಂಬವಾಗಿತ್ತು. ಕಳೆದ ಮೂರು ದಿನದಲ್ಲಿ ತಾಯಿ ನೀಲಾಬಾಯಿ ಮತ್ತು ರವಿ ಶವ ಪತ್ತೆ ಆಗಿತ್ತು. ಇಂದು ನಾಲ್ಕನೇ ದಿನದ ಕಾರ್ಯಾಚರಣೆ ವೇಳೆ ಮಗಳು ಶ್ವೇತಾ ಮತ್ತು ಅಳಿಯ ಪರಶುರಾಮ ಮೃತದೇಹಗಳು ಪತ್ತೆಯಾಗಿವೆ.
ಕಾರ್ಯಾಚರಣೆ ಬಳಿಕ ಮಾತನಾಡಿದ ಮುಳುಗು ತಜ್ಞ ಈಶ್ವರ್ ಮಲ್ಪೆ, ನಾನು ಮೊದಲ ದಿನವೇ ಮಾತು ಕೊಟ್ಟಿದ್ದೆ. ನಾಲ್ಕು ಶವ ಪತ್ತೆ ಮಾಡಿ ಇಲ್ಲಿಂದ ಹೋಗುತ್ತೇನೆ ಅಂತ. ಅದೇ ರೀತಿ ಇಂದು ಮತ್ತೆ ಎರಡು ಶವ ಪತ್ತೆ ಮಾಡಿದೆ. ಈಗ ನಾಲ್ಕು ಶವ ಪತ್ತೆ ಮಾಡಿರುವ ಸಮಾಧಾನ ನನಗಿದೆ. ಆದರೆ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಶ್ವೇತಾ ಮತ್ತು ಪರಶುರಾಮ ತಂದೆ-ತಾಯಿ ಮೃತಪಟ್ಟಿದ್ದಾರೆ. ಅವರ ಮಕ್ಕಳು ತಂದೆ-ತಾಯಿ ಇಲ್ಲದೇ ತಬ್ಬಲಿ ಆಗಿದ್ದಾರೆ. ನಿಜಕ್ಕೂ ಈ ದುರ್ಘಟನೆಯಿಂದ ನನಗೆ ಬೇಸರ ಆಗಿದೆ. ಕಾರ್ಯಾಚರಣೆಗೆ ಗ್ರಾಮಸ್ಥರು, ಪೋಲೀಸರು ಮತ್ತು ಎಸ್ಡಿಆರ್ಎಫ್ ತಂಡ ಸಹಾಯ ಮಾಡಿದೆ ಎಂದು ಹೇಳಿದ್ದಾರೆ.






