ಅಜ್ಜಿಯಿಂದಲೇ ಮೊಮ್ಮಗಳಿಗೆ ಮನೆಯಲ್ಲೇ ಹೆರಿಗೆ ಮಾಡಿಸಿ ನವಜಾತ ಶಿಶು ಹತ್ಯೆ!
Views: 79
ಕನ್ನಡ ಕರಾವಳಿ ಸುದ್ದಿ: ಮೊಮ್ಮಗಳು ಮದುವೆಗೆ ಮುಂಚೆ ಗರ್ಭಿಣಿಯಾಗಿದ್ದು, ವಿಷಯ ಹೊರಗೆ ತಿಳಿದರೆ ಮರ್ಯಾದೆ ಹೋಗುತ್ತದೆ ಎಂದು ಮಗುವನ್ನು ಜನಿಸಿದ ಕೂಡಲೇ ಅಜ್ಜಿಯೇ ಕತ್ತು ಹಿಸುಕಿ ಕೊಂದ ಹೇಯ ಕೃತ್ಯ ತರೀಕೆರೆ ತಾಲೂಕು ಬಾವಿಕೆರೆ ಗ್ರಾಮದಲ್ಲಿ ನಡೆದಿದೆ.
ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದ ಯುವತಿ ವೀರಗಾಸೆ ಕಲಾವಿದೆಯಾಗಿದ್ದಳು. ಮದುವೆಗೂ ಮುಂಚೆಯೇ ಗರ್ಭಿಣಿಯಾಗಿದ್ದು, ಮನೆಯಲ್ಲಿ ವಿಷಯ ಗೊತ್ತಾಗಿದೆ. ವಿಷಯ ಹೊರಗಡೆ ಗೊತ್ತಾದರೆ ಮರ್ಯಾದೆ ಹೋಗುತ್ತದೆ ಎಂದು ಕುಟುಂಬಸ್ಥರು ಮನೆಯಲ್ಲೇ ಹೆರಿಗೆ ಮಾಡಿಸಲು ನಿರ್ಧರಿಸಿದ್ದಾರೆ. ದಿನ ತುಂಬುತ್ತಿದ್ದಂತೆ ಯುವತಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಹೋದರೆ ಗುಟ್ಟು ರಟ್ಟಾಗುತ್ತದೆ ಎಂಬ ಕಾರಣಕ್ಕೆ ತಂದೆ, ತಾಯಿ ಹಾಗೂ ಅಜ್ಜಿ ಸೇರಿಕೊಂಡು ಜ.4 ರಂದು ಮನೆಯಲ್ಲೇ ಹೆರಿಗೆ ಮಾಡಿಸಿದ್ದಾರೆ.
ಜನಿಸಿದ ಕೂಡಲೇ ಗಂಡು ಮಗುವನ್ನು ಸ್ಥಳದಲ್ಲಿದ್ದ ಅಜ್ಜಿ ಕತ್ತು ಹಿಸುಕಿ ಕೊಂದಿದ್ದಾಳೆ. ರಕ್ತಸಿಕ್ತ ಮಗುವಿನ ಶವವನ್ನು ಬ್ಯಾಗ್‌ನಲ್ಲಿ ತುಂಬಿ ನಿರ್ಜನ ಪ್ರದೇಶದಲ್ಲಿ ಹೂತು ಹಾಕಿದ್ದಾರೆ.
ಪ್ರಕರಣ ಬಯಲಾಗಿದ್ದು ಹೇಗೆ?
ಹತ್ಯೆ ಬಳಿಕ ಹೊಂಡ ತೆಗೆದು ಹೂಳುವುದನ್ನು ಗ್ರಾಮದ ಕೆಲವರು ನೋಡಿದ್ದಾರೆ. ಕೆಲವು ದಿನ ಸುಮ್ಮನಿದ್ದ ಅವರು, ಬಳಿಕ ಪೊಲೀಸರಿಗೆ ತಿಳಿಸಿದ್ದಾರೆ.ಸ್ಥಳಕ್ಕೆ ತೆರಳಿದ ಪೊಲೀಸರು ಅಗೆದು ನೋಡಿದಾಗ ಕೃತ್ಯ ಬಯಲಿಗೆ ಬಂದಿದೆ. ಈ ಕುರಿತು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ತನಿಖೆ ಮುಂದುವರಿದಿದ್ದು ವರದಿ ಬಂದ ಬಳಿಕ ಸತ್ಯಾ ಸತ್ಯತೆ ತಿಳಿಯಲಿದೆ.






