ವೃದ್ಧ ದಂಪತಿ ಮನೆಯಲ್ಲಿ ಮಲಗಿದಲ್ಲೇ ಅನುಮಾನಾಸ್ಪದ ಸಾವು
Views: 101
ಕನ್ನಡ ಕರಾವಳಿ ಸುದ್ದಿ: ವೃದ್ಧ ದಂಪತಿ ಮನೆಯಲ್ಲಿಯೇ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಭೂತನಗುಡಿ ಬಡಾವಣೆಯ ನಿವಾಸದಲ್ಲಿ ಈ ಘಟನೆ ನಡೆದಿದೆ. ಚಂದ್ರಪ್ಪ (80) ಹಾಗೂ ಜಯಮ್ಮ (75) ಮೃತ ದಂಪತಿ. ಮೃತದೇಹಗಳು ಮನೆಯಲ್ಲಿರುವ ಪ್ರತ್ಯೇಕ ಕೊಠಡಿಗಳಲ್ಲಿ ಪತ್ತೆಯಾಗಿವೆ.
ಮೃತ ದಂಪತಿಗೆ ಮೂವರು ಗಂಡು ಮಕ್ಕಳಿದ್ದಾರೆ. ಈ ಪೈಕಿ ಒಬ್ಬರು ಶಿಕ್ಷಕರಾಗಿದ್ದರೆ, ಮತ್ತೋರ್ವ ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಅವರ ಸಂಸ್ಥೆಯಲ್ಲಿ ನೌಕರರಾಗಿದ್ದಾರೆ. ಇನ್ನೊಬ್ಬರು ಶಿವಮೊಗ್ಗದ ಚೀಲೂರು ಶಾಲೆಯಲ್ಲಿ ಪ್ರಾಂಶುಪಾಲರಾಗಿದ್ದಾರೆ.
ಮಕ್ಕಳು ಪೋಷಕರಿಗೆ ಕರೆ ಮಾಡಿದಾಗ ದಂಪತಿ ಕರೆ ಸ್ವೀಕರಿಸಿಲ್ಲ. ಇದರಿಂದ ಆತಂಕಗೊಂಡ ಮಕ್ಕಳು ಸಮೀಪದ ಮನೆಯವರಿಗೆ ಕರೆ ಮಾಡಿ ಮನೆ ಬಳಿ ಹೋಗಿ ನೋಡುವಂತೆ ಹೇಳಿದ್ದಾರೆ. ಮನೆ ಬಳಿ ಬಂದು ನೋಡಿದಾಗ ದಂಪತಿ ಇಬ್ಬರೂ ಸಾವನ್ನಪ್ಪಿರುವುದು ಕಂಡುಬಂದಿದೆ. ಮನೆಯ ರೂಮಿನ ಬೆಡ್ ಮೇಲೆ ಚಂದ್ರಪ್ಪ ಮೃತದೇಹ ಪತ್ತೆಯಾಗಿದ್ದರೆ, ಪತ್ನಿ ಮೃತದೇಹ ಮನೆಯ ಹಾಲ್ ನಲ್ಲಿ ಪತ್ತೆಯಾಗಿದೆ. ದರೋಡೆಕೋರರು ಮನೆಗೆ ನುಗ್ಗಿ ದಂಪತಿಯನ್ನು ಹತ್ಯೆಗೈದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಭದ್ರಾವತಿ ಓಲ್ಡ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






