ಬ್ಯಾಂಕ್ ಆಫ್ ಬರೋಡಾ ಶಾಖೆಗೆ 71 ಲಕ್ಷಕ್ಕೂ ಹೆಚ್ಚು ಹಣ ಮತ್ತು ಚಿನ್ನವನ್ನು ವಂಚಿಸಿ ಜಂಟಿ ವ್ಯವಸ್ಥಾಪಕ ಪರಾರಿ
Views: 125
ಕನ್ನಡ ಕರಾವಳಿ ಸುದ್ದಿ: ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಸುಮಾರು 71 ಲಕ್ಷ ರೂಪಾಯಿಗೂ ಅಧಿಕ ಹಣ ಮತ್ತು ಚಿನ್ನವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಜಂಟಿ ವ್ಯವಸ್ಥಾಪಕರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ
ಪೆರ್ನೆ ಶಾಖೆಯ ಜಂಟಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸುಬ್ರಹ್ಮಣ್ಯಂ (30 ವ) ಎಂಬಾತನೇ ವಂಚನೆ ಎಸಗಿದ ಆರೋಪಿ.
ಈತ ಬ್ಯಾಂಕ್‌ನ ಎಟಿಎಂ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಹೊಂದಿದ್ದನು. 2024ರ ಫೆಬ್ರವರಿ 6ರಿಂದ 2025ರ ಡಿಸೆಂಬರ್ 16ರ ಅವಧಿಯಲ್ಲಿ ಎಟಿಎಂಗೆ ನಿಗದಿತ ನಗದನ್ನು ಜಮಾ ಮಾಡದೆ, ಅದರಲ್ಲಿ ಸಣ್ಣ ಪ್ರಮಾಣದ ಹಣವನ್ನು ಕಡಿಮೆ ಜಮಾ ಮಾಡುವ ಮೂಲಕ ಹಂತ ಹಂತವಾಗಿ ಒಟ್ಟು 70,86,000/- ರೂ. ಗಳನ್ನು ದುರುಪಯೋಗಪಡಿಸಿಕೊಂಡಿರುವುದು ಆಂತರಿಕ ತನಿಖೆಯಲ್ಲಿ ತಿಳಿದುಬಂದಿದೆ.
ಹಣದ ದುರುಪಯೋಗದ ಜೊತೆಗೆ, ಡಿಸೆಂಬರ್ 19ರಂದು ಬ್ಯಾಂಕ್‌ನ ಸೇಫ್ ಲಾಕರ್ ಪರಿಶೀಲಿಸಿದಾಗ 55,000/- ರೂ.ಮೌಲ್ಯದ 4.400 ಗ್ರಾಂ ಚಿನ್ನ ಕೂಡ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಹಣದ ಅವ್ಯವಹಾರ ಪತ್ತೆಯಾಗುತ್ತಿದ್ದಂತೆಯೇ ಎಚ್ಚೆತ್ತ ಆರೋಪಿ ಸುಬ್ರಹ್ಮಣ್ಯಂ, ಡಿಸೆಂಬರ್ 17ರಂದು ಯಾರಿಗೂ ಮಾಹಿತಿ ನೀಡದೆ ಕಚೇರಿಯಿಂದ ತೆರಳಿ ತಲೆಮರೆಸಿಕೊಂಡಿದ್ದಾನೆ.
ಒಟ್ಟು 71,41,000/- ರೂ. ಮೌಲ್ಯದ ನಗದು ಮತ್ತು ಚಿನ್ನದ ವಂಚನೆಯ ಕುರಿತು ಬ್ಯಾಂಕ್ ಆಫ್ ಬರೋಡಾದ ಮಂಗಳೂರು ಪ್ರಾದೇಶಿಕ ವ್ಯವಸ್ಥಾಪಕರಾದ ಸಿ.ವಿ.ಎಸ್. ಚಂದ್ರಶೇಖರ್ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಅನ್ವಯ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು. ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.






