ಅಕ್ರಮವಾಗಿ ಮನೆಗೆ ಪ್ರವೇಶಿಸಿ ಹಲ್ಲೆ ಆರೋಪ, ಹೆಡ್ ಕಾನ್‌ಸ್ಟೇಬಲ್ ಅಮಾನತು
Views: 167
ಕನ್ನಡ ಕರಾವಳಿ ಸುದ್ದಿ: ಅಕ್ರಮವಾಗಿ ಮನೆಗೆ ಪ್ರವೇಶಿಸಿ ಮನೆಯ ಸದಸ್ಯರಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಕಡಬ ಠಾಣೆಯ ಹೆಡ್ ಕಾನ್‌ಸ್ಟೇಬಲ್ ರಾಜು ಎಂಬುವರನ್ನು ಬಂಧಿಸಿ ಆತನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಕಡಬ ತಾಲೂಕು ಕೊಯಿಲ ನಿವಾಸಿ ಬಾಬು ಗೌಡ ಎಂಬವರ ಮನೆಯ ಸಮೀಪವಿರುವ ಅವರ ಸಹೋದರ ಹರೀಶ ಎಂಬವರ ಮನೆಗೆ ತಡರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಅಕ್ರಮ ಪ್ರವೇಶಿಸಿದ್ದು ಮನೆಯ ಸದಸ್ಯರು ಆತನನ್ನು ಹಿಡಿದುಕೊಂಡಿದ್ದು, ಈ ವೇಳೆ ಆತ ತಪ್ಪಿಸಿಕೊಳ್ಳುವ ಉದ್ದೇಶದಿಂದ ಮನೆಯ ಸದಸ್ಯ ಚೇತನ್ ಎಂಬಾತನಿಗೆ ಕೈಯಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಆತನನ್ನು ಉಳಿದವರ ಸಹಾಯದಿಂದ ಹಿಡಿದು ವಿಚಾರಿಸಿದಾಗ ಅಪರಿಚಿತ ವ್ಯಕ್ತಿ ಕಡಬ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ರಾಜು ನಾಯ್ಕ ಎಂಬುದಾಗಿ ತಿಳಿದು ಬಂದಿತ್ತು.
ರಾಜು ನಾಯ್ಕ ಅವರು ತಡರಾತ್ರಿ ಮನೆಯೊಳಗೆ ಅಕ್ರಮವಾಗಿ ಪ್ರವೇಶ ಮಾಡಿ, ಮನೆಯ ಸದಸ್ಯರಿಗೆ ಕೈಯಿಂದ ಹಲ್ಲೆ ನಡೆಸಿದ ಬಗ್ಗೆ ಬಾಬು ಗೌಡ ಅವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಈ ದೂರಿನ ಹಿನ್ನೆಲೆಯಲ್ಲಿ ಆರೋಪಿ ರಾಜು ನಾಯ್ಕ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಹಾಗೂ ಆತನನ್ನು ತಕ್ಷಣ ಕರ್ತವ್ಯದಿಂದ ಅಮಾನತುಗೊಳಿಸಲಾಗಿರುತ್ತದೆ ಎಂದು ದ.ಕ.ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.






