ಕುಂದಾಪುರ: ಕೋಟೇಶ್ವರದಲ್ಲಿ ಸರ್ವ ಜನಮನದ “ಕೊಡಿ ಹಬ್ಬ”
Views: 96
ಕನ್ನಡ ಕರಾವಳಿ ಸುದ್ದಿ:ಹದಿ ಹರೆಯದವರಿಗೆ ಜೋಡಿಯನ್ನು ಅರಸುವ ತವಕ, ನವ ವಿವಾಹಿತರಿಗೆ ಕರುಳಕುಡಿ ಚಿಗುರಿ ಸಂತಸ ಚಿಮ್ಮುತ್ತದೆ, ಕೃಷಿಕರಿಗೆ ಫಸಲು ತುಂಬಿ ಸಮೃದ್ಧಿಯ ಕುಡಿ ಮೊಳೆಯತ್ತದೆ ಒಟ್ಟಿನಲ್ಲಿ ಕೋಟೇಶ್ವರ ನಗರವಿಡೀ ಶೃಂಗಾರ, ಧಾರ್ಮಿಕ ಸಾಂಸ್ಕೃತಿಕ ಮತ ಪಂಥೀಯ ಜಾನೃತ್ಯ ಸಾರುವ ಕೊಡಿ ಹಬ್ಬವನ್ನು ನೋಡಿಯೇ ನಲಿಯಬೇಕು.
ಡಿಸೆಂಬರ್ 4ರಂದು ಆರಂಭಗೊಂಡ ಕೊಡಿ ಹಬ್ಬ ಸರಿಸುಮಾರು ಒಂದು ವಾರಗಳ ಕಾಲ ಸಂಭ್ರಮದ ವಾತಾವರಣ
ಸಪ್ತ ಕ್ಷೇತ್ರಗಳಲ್ಲಿ ವಿಶಿಷ್ಟ ಸ್ಥಾನ ಹೊಂದಿದ ಧ್ವಜಪುರ,ಕೋಟೇಶ್ವರ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲೇ ಪ್ರಸಿದ್ಧ ಪುಣ್ಯಕ್ಷೇತ್ರವಾಗಿದೆ. ಪರಶುರಾಮ ಸೃಷ್ಟಿಯ ಪುರಾಣ ಪುಣ್ಯಕ್ಷೇತ್ರಗಳಲ್ಲಿ ಮಧ್ಯಮ ಕ್ಷೇತ್ರವೆಂದು ಪುರಾಣ ಕಾಲದಲ್ಲಿ ಧ್ವಜಪುರವೆಂದೂ ವರ್ತಮಾನ ಕಾಲದಲ್ಲಿ ಕೋಟೇಶ್ವರ ಎಂದು ಪ್ರಸಿದ್ಧವಾಗಿದೆ. ಈ ಕ್ಷೇತ್ರ ಕೊಟೇಶ್ವರದ ಸ್ಥಳ ಪುರಾಣದ ಬಗ್ಗೆ ತಿಳಿಯೋಣ

ಒಂದು ಕಾಲದಲ್ಲಿ ಈ ಪರಿಸರ ಬಹಳ ಬರಗಾಲದಿಂದ ನಡುಗಿ ಹೋಗಿತ್ತು ಆಗ ವಿಭಾಂಡ ಋಷಿಯ ಮುಖಂಡತ್ವದಲ್ಲಿ ಒಂದು ಕೋಟಿ ಮುನಿಗಳು ತಪಸ್ಸು ಮಾಡಿ ಶಿವನನ್ನು ಒಲಿಸಿಕೊಳ್ಳುತ್ತಾರೆ.ಆಗ ಪರಮೇಶ್ವರ ಇಲ್ಲಿ ಕೋಟಿಲಿಂಗಗಳ ರೂಪದಲ್ಲಿ ನೆಲೆ ನಿಂತು ಬರಗಾಲ ದೂರ ಮಾಡಿ ಜನರನ್ನು ರಕ್ಷಿಸುತ್ತಾನೆ. ಇವನು ಕೋಟಿ ಲಿಂಗಗಳಲ್ಲಿ ಐಕ್ಯನಾಗಿದ್ದರಿಂದ ಇಲ್ಲಿನ ಶಿವನನ್ನು ‘ಶ್ರೀ ಕೋಟಿಲಿಂಗೇಶ್ವರ’ನೆಂದು ಕರೆಯುತ್ತಾರೆ.
ಈ ದೇವಾಲಯದಲ್ಲಿ ಶೂಲಪಾಣಿ, ಪರಶುಪಾಣೆ ಎಂಬ ದ್ವಾರಪಾಲಕರು ಕಂಗೊಳಿಸುತ್ತಾರೆ. ಶ್ರೀ ಕೋಟಿಲಿಂಗೇಶ್ವರ ಸಾನಿಧ್ಯದಲ್ಲಿ ಹಲವಾರು ಪರಿವಾರ ದೇವರುಗಳಿದ್ದಾರೆ ಮೂರನೇ ಸುತ್ತಿನಲ್ಲಿ ಮೂಲೆ ಗಣಪತಿ ನಾಲ್ಕನೇ ಸುತ್ತಿನಲ್ಲಿ ಸಪ್ತ ಮಾತ್ರಕೆಯರು, ಸುಬ್ರಹ್ಮಣ್ಯ, ಜೇಷ್ಠ ಲಕ್ಷ್ಮಿ, ಮಹಿಷಾಸುರಮರ್ದಿನಿ, ವೆಂಕಟರಮಣ, ಪಾರ್ವತಿ ದೇವಿ ಇನ್ನು ಐದನೇ ಸುತ್ತಿನಲ್ಲಿ ಆದಿ ಗಣಪತಿ ಮುಖ್ಯಪ್ರಾಣ ವಿಷ್ಣು ಮತ್ತು ಗೋಪಾಲಕೃಷ್ಣನನ್ನು ಕಾಣಬಹುದು. ಬಾವೀ ಸಮೀರ ಶ್ರೀ ವಾದಿರಾಜ ಗುರುಗಳು ಬಾಲ್ಯದಿಂದಲೂ ಸಂಪರ್ಕ ಪಡೆದ ಕ್ಷೇತ್ರವಿದು ಸಂಸ್ಕೃತದ ಮೊದಲ ಪ್ರವಾಸ ಗ್ರಂಥ ಎಂದು ಹೆಸರು ಪಡೆದ ಶ್ರೀ ವಾದಿರಾಜರ ‘ತೀರ್ಥ ಪ್ರಬಂಧ’ದಲ್ಲಿ ಕೋಟೇಶ್ವರ ಕ್ಷೇತ್ರವನ್ನು ಬಹುವಾಗಿ ವರ್ಣಿಸಲಾಗಿದೆ.

ಸರ್ವಜನಮನದ ‘ಕೊಡಿ ಹಬ್ಬ’
‘ಆಗಮ ಶಾಸ್ತ್ರದಂತೆ ಶ್ರೀ ಕೋಟಿಲಿಂಗೇಶ್ವರನು ಕೋಡಿ ತಿಂಗಳ ಹುಣ್ಣಿಮೆಯ ದಿನ ಕೋಟೇಶ್ವರದಲ್ಲಿ ನೆಲೆ ನಿಂತನೆಂದು ಹೇಳಲಾಗುತ್ತದೆ.
ಬಸ್ರೂರಿನ ಮಹಾರಾಜ ವಸು ಚಕ್ರವರ್ತಿಗೆ ಮಕ್ಕಳಿಲ್ಲವೆಂಬ ಕೊರಗು ಕಾಡುತ್ತಿತ್ತು. ಶ್ರೀ ಕೋಟಿಲಿಂಗೇಶ್ವರನಲ್ಲಿ ತನಗೆ ಮಕ್ಕಳಾದರೆ ದೇವಾಲಯ ನಿರ್ಮಿಸುತ್ತೇನೆ ಎಂಬ ಹರಕೆ ಹೊರುತ್ತಾನೆ ಇವನ ಹರಕೆ ಫಲಿಸಿ ಮಕ್ಕಳಾಗುತ್ತದೆ ತನ್ನ ಮಾತಿನಂತೆ ದೇವಸ್ಥಾನ ಬೃಹತ್ ಕೆರೆ ನಿರ್ಮಿಸಿದನಂತೆ ಆತನಿಗೆ ಮನಸ್ಸಿನಲ್ಲಿ ಕೋಟೇಶ್ವರನಿಗೆ ರಥೋತ್ಸವ ಮಾಡಿಸಬೇಕೆಂಬ ಮನಸ್ಸು ಉಂಟಾಗಿ ಅದರ ಸಿದ್ಧತೆಗೆ ಆರಂಭಿಸುತ್ತಾರೆ ಅವರ ನಿರೀಕ್ಷೆಯಂತೆ ಸಮಯಕ್ಕೆ ಸರಿಯಾಗಿ ಬ್ರಹ್ಮರಥ ತಯಾರು ಆಗೋದಿಲ್ಲ ಆದರೆ ಸಂಕಲ್ಪದಂತೆ ರಥೋತ್ಸವ ಮಾಡಲೇಬೇಕೆಂಬ ಬಲವಾದ ಇಚ್ಛೆ ಇತ್ತು ಆಗ ಬಿದಿರು ಕಬ್ಬಿನ ಜಿಲ್ಲೆಗಳಿಂದ ರಥ ತಯಾರಿಸಿ ಪ್ರಥಮವಾಗಿ ರಥೋತ್ಸವ ಮಾಡಿಸಿದ ಪ್ರಪ್ರಥಮವಾಗಿ ಕೊಡಿ ಕಬ್ಬಿನ ಜಿಲ್ಲೆಗಳಿಂದ ರಥವಾದ್ದರಿಂದ ಆ ರಥೋತ್ಸವಕ್ಕೆ ‘ಕೊಡಿ ಹಬ್ಬ’ವೆಂದು ಕರೆಯಲಾಗಿದೆ.
ಸೃಷ್ಟಿಕರ್ತ ಬ್ರಹ್ಮನು ಸಂಚಾರಕ್ಕೆ ರಥವನ್ನು ಬಳಸಿ ಅದೇ ಬ್ರಹ್ಮರಥವೆಂದು ಹೆಸರಿಸಲಾಗಿದೆ ದೇಶದ ರಥಗಳಲ್ಲಿ ತಿರುವಾಂಕೂರಿನ ದೇವಾಲಯ ಬ್ರಹ್ಮರಥ ಅತ್ಯಂತ ದೊಡ್ಡದು ನಂತರ ಎರಡನೇ ಸಾಲಿಗೆ ಬರುವ ರಥವೇ ಕೋಟೇಶ್ವರದ ಬ್ರಹ್ಮರಥ ರಥರೂಢನಾದ ದೇವರನ್ನು ನೋಡಿದರೆ ಮನುಷ್ಯನಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಿದೆ ರಥವನ್ನು ನೋಡಿದರೆ ಜೀವನ ಪಾವನ ಆಗುತ್ತದೆ ಎಂಬ ನಂಬಿಕೆಯಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಾರೆ.
ಈ ದೇವಾಲಯ ಹಲವು ವಿಶೇಷತೆಗಳಿಂದ ಕೂಡಿದೆ ಐದು ಎಕರೆ ಸ್ಥಳವನ್ನು ಹೊಂದಿ ಐದು ಪ್ರದಕ್ಷಿಣೆ ಪಥದಲ್ಲಿದ್ದು 114 ಹಸ್ತ ಪ್ರಮಾಣದ ಧ್ವಜಸ್ತಂಭ ಹೊಂದಿರುವುದರಿಂದ ಇಲ್ಲಿ ಈಶ್ವರ ಧ್ವಜೇಶ್ವರನೆಂದು ಪ್ರಸಿದ್ಧನಾಗಿದ್ದಾನೆ.
12- 13ನೇ ಶತಮಾನಕ್ಕೆ ಸೇರಿದ ಈ ದೇವಳದಲ್ಲಿ 60 ಅಡಿ ಎತ್ತರದ ಏಕಮರ ಧ್ವಜಸ್ತಂಭ ಮತ್ತು ಗರ್ಭಗುಡಿಯೊಳಗೆ ಚಿಕ್ಕಬಾವಿಯಲ್ಲಿ ರುದ್ರಾಕ್ಷಿ ಮಣಿಯಂತಿರುವ ಅಸಂಖ್ಯ ಶಿವಲಿಂಗಗಳಿವೆ.
ಜನಾಕರ್ಷಣೆಗೆ ಎರಡು ತಟ್ಟಿರಾಯ ಹಬ್ಬಕ್ಕೆ ಮೆರಗು ತಂದಿದೆ. ರಥೋತ್ಸವ ಮುನ್ನ ಏಳು ದಿನಗಳ ಪರ್ಯಂತ ಸಂಧ್ಯೋತ್ಸವ, ನಗರ ಸಂಚಾರ ಕಟ್ಟೆ ಪೂಜೆಗಳು ಜರುಗುತ್ತದೆ ಹಬ್ಬದ ಮರುದಿನ ಓಕುಳಿ ಆಟಕ್ಕೆ ‘ಹೌದ್ರಯ್ಯ, ಎಂದೆನುತ ನೀರು ತುಂಬಿದ ಓಕುಳಿ ಹೊಂಡದ ಬಾಳೆ ಕೊನೆ ಪಡೆಯಲು ಶೌರ್ಯ ಪ್ರದರ್ಶನ ನಡೆಯುತ್ತದೆ.
ವಿಶಾಲವಾದ ಕೋಟಿ ತೀರ್ಥ ಪುಷ್ಕರಣಿ

ಈ ಕ್ಷೇತ್ರದ ಮಹಿಮೆ ಅಪಾರ ಇಲ್ಲಿನ ಸಮೀಪದ. ವಸುಪುರದ ರಾಜ (ಈಗಿನ ಬಸ್ರೂರು) ವಸು ಚಕ್ರವರ್ತಿಯು ತನ್ನ ಬಯಕೆಯನ್ನು ಕೋಟಿ ಲಿಂಗೇಶ್ವರ ಈಡೇರಿಸಿದ್ದರಿಂದ ಶ್ರೀ ಕೋಟೇಶ್ವರ ದೇವಳ ಹಾಗೂ ದೇವಳದ ಕೆರೆ ನಿರ್ಮಿಸಿದನೆಂದು ಸ್ಥಳ ಪುರಾಣದಿಂದ ತಿಳಿದು ಬಂದಿರುತ್ತದೆ.
ದೇವಸ್ಥಾನದ ಕೆರೆ ನಾಲ್ಕುವರೆ ಎಕರೆ ವಿಸ್ತೀರ್ಣ ಹೊಂದಿದ್ದು ಈ ಪುಷ್ಕರಣಿಯನ್ನು ಕೋಟಿ ತೀರ್ಥ ಎಂದೇ ಪ್ರಸಿದ್ಧವಾಗಿದೆ.ಈ ಕೆರೆಯಲ್ಲಿ 18 ಪಣ್ಯ ನದಿಗಳ ಸಂಗಮವಿದೆ ಎಂದು ಪುರಾಣಗಳಿಂದ ತಿಳಿದು ಬಂದಿರುತ್ತದೆ. ಪುರಾಣ ಕಾಲದಲ್ಲಿ ಈ ಕೆರೆಯನ್ನು ಬ್ರಹ್ಮ ತೀರ್ಥ ಎಂದು ಕರೆಯುತ್ತಿದ್ದರಂತೆ ಈ ಕೋಟಿ ತೀರ್ಥದಲ್ಲಿ ಸ್ನಾನ ಮಾಡಿದರೆ ಸರ್ವ ರೋಗಗಳು ನಾಶವಾಗಿ ಆರೋಗ್ಯವಂತರಾಗುತ್ತಾರೆ ಕೋಟಿ ತೀರ್ಥ ಸ್ನಾನದಿಂದ ಸರ್ವ ಪಾಪ ಜನ್ಮ ಜನ್ಮಾಂತರದ ಪಾಪ ನಾಶವಾಗಿ ವಿಶೇಷ ಪುಣ್ಯ ಲಭಿಸುತ್ತದೆ. ಈ ಕೆರೆಯ ಸುತ್ತ ಸುತ್ತಕ್ಕಿ ಸೇವೆ ನಡೆಯುತ್ತದೆ ಮದುವೆಯಾದ ಜೋಡಿ ಸುತ್ತಕ್ಕಿ ತಳಿಯುವುದರಿಂದ ತಮ್ಮ ಇಷ್ಟಾರ್ಥ ದೊರೆಯುತ್ತದೆ ಎಂಬ ನಂಬಿಕೆ ಇದೆ.
ಕೋಟೇಶ್ವರದ ಕೋಟಿ ತೀರ್ಥ ಪುಷ್ಕರಣಿ ವಂಡಾರು ಕಂಬಳ ಗದ್ದೆ ಒಂದೇ ರಾತ್ರಿ ನಿರ್ಮಿಸಿದ್ದಾರೆ.ಕೊಡಿ ಹಬ್ಬದ ದಿನ ವಂಡಾರು ಕಂಬಳಗದ್ದೆಯಲ್ಲಿ ದೂಳು ಏಳುತ್ತದೆ ಮತ್ತು ವಂಡಾರು ಕಂಬಳ ದಿನ ಕೋಟಿ ತೀರ್ಥದಲ್ಲಿ ಕೆಸರು ಏಳುತ್ತದೆ ಎನ್ನುವ ಮಾತು ಇದೆ.
ಬ್ರಹ್ಮರಥದ ಬಗ್ಗೆ ಒಂದು ರಮ್ಯ ಕಲ್ಪನೆ ಹೀಗಿದೆ ರಥದ ಆರು ಗಾಲಿಗಳೆ ಆರು ಋತುಗಳು ಮೇಲಿನ 12 ತೊಲೆಗಳೇ 12 ಮಾಸಗಳು. ಇದಿರಿನ ಬಾಗಿಲೇ ಹಗಲು. ಹಿಂದಿನ ಬಾಗಿಲೇ ರಾತ್ರಿ. ಪಾಶ್ವದ ಬಾಗಿಲುಗಳೇ ಎರಡು ಸಂಧ್ಯಾಕಾಲಗಳು. ಪತಾಕೆಗಳೇ ಯಾಮಗಳು ಮುಹೂರ್ತಗಳು ಗಳಿಗೆಗಳು ಹಾಗೂ ಲಿಕ್ತಿಗಳು ಶಿಖರ ಅಂದಿನ ಪೂರ್ಣಚಂದ್ರ ಹೀಗೆ ಸೂರ್ಯನಾತ್ಮಕನಾದ ಶ್ರೀ ಕೋಟಿಲಿಂಗೇಶ್ವರ ವರುಷಕೊಮ್ಮೆ ವರ್ಷ ರೂಪವಾದ ರಥವನ್ನೇರಿ ಲೋಕ ಕಲ್ಯಾಣಾರ್ಥವಾಗಿ ಸಂಚರಿಸುವುದೇ ಅಂದಿನ ಬ್ರಹ್ಮರಥೋತ್ಸವ ಅಲ್ಲದೆ ಇಲ್ಲಿ ದೀಪಾವಳಿ, ಶಿವರಾತ್ರಿ ಸಂಧ್ಯೋತ್ಸವ ಸಂದರ್ಭಗಳಲ್ಲಿ ಎಳೆಯಲು ಇನ್ನೊಂದು ಸುಂದರ ಪುಷ್ಪರಥವಿದೆ.
ಕೊಡಿ ಹಬ್ಬದ ಮರುದಿನ ಜರುಗುವ ಓಕುಳಿ ಶೌರ್ಯ ಪ್ರದರ್ಶನ, ಜಲಕೇಳಿಯಾಟ ಇಲ್ಲಿನ ಬ್ರಹ್ಮರಥೋತ್ಸವ ಮತ ಸಹಿಷ್ಣುತೆಗೆ ಒಂದು ಜ್ವಲಂತ ಉದಾಹರಣೆ, ಮುಸ್ಲಿಂ ಬಂಧುಗಳಿಗೂ ರಥ ನಿರ್ಮಾಣದಲ್ಲಿ ಹಕ್ಕು ಇದೆ ಸರ್ವಜಾತಿ ಅವರಿಗೂ ಪ್ರಾತಿನಿಧ್ಯವಿದೆ. ಹೀಗಾಗಿ ಕೊಡಿ ಹಬ್ಬ ಸರ್ವ ಜನ ಮನದ ಹಬ್ಬ.
ಹೊಸ ಮದುಮಕ್ಕಳಿಗಂತೂ ‘ಕೊಡಿ ಹಬ್ಬ’ ಉತ್ಸಾಹದ ಚಿಲುಮೆ ಎಬ್ಬಿಸುತ್ತದೆ ಅವರು ತಪ್ಪದೇ ಹಬ್ಬಕ್ಕೆ ಹಾಜರಾಗಿ ದೇವರ ದರ್ಶನ ಗೈದು, ಕಬ್ಬಿನ ಕೊಡಿಯನ್ನು ಮನೆಗೆ ಕೊಂಡು ಹೋಗಲೇಬೇಕು ಮುಂದಿನ ಕುಡಿ ಹಬ್ಬದ ಒಳಗೆ ಅವರ ಬದುಕಿನ ಕುಡಿ ಅರಳುವುದು ಖಂಡಿತವಂತೆ ಹೀಗಾಗಿ ಕುಡಿ ಹಬ್ಬ ಹೊಸ ಮಧುಮಕ್ಕಳ ಹಬ್ಬ ಕಬ್ಬಿನ ಕುಡಿಯ ಹಬ್ಬ ಜನಪದ ನಂಬಿಕೆ ಹೀಗೆ ಬೇಡುತ್ತದೆ.

ಕುಂದಾಪುರದ ಹೆಬ್ಬಾಗಿಲು ಕೋಟೇಶ್ವರ
ಉಡುಪಿ ಜಿಲ್ಲೆಯ ಉತ್ತರ ತುದಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತಾಲೂಕಿನ ಕೇಂದ್ರವಾದ ಕುಂದಾಪುರದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಪಟ್ಟಣವೇ ಕೋಟೇಶ್ವರ ಇಲ್ಲಿಂದ ಶ್ರೀ ವಾದಿರಾಜರ ಜನ್ಮಸ್ಥಳ 5 ಕಿಲೋಮೀಟರ್ ದೂರದ ಹೂವಿನಕೆರೆಯಲ್ಲಿದೆ. ಇನ್ನೊಂದು ಪ್ರಸಿದ್ಧವಾದ ಸಪ್ತ ಕ್ಷೇತ್ರದಲ್ಲಿ ಒಂದಾದ ಹರಿಹರ ದೇವಸ್ಥಾನ ಮತ್ತು ಆನೆಗುಡ್ಡೆ ವಿನಾಯಕ ದೇವಸ್ಥಾನ 3 ಕಿ.ಮೀ ದೂರದಲ್ಲಿದೆ.ಕೊಂಕಣ ರೈಲ್ವೆ ನಿಲ್ದಾಣ 5 ಕಿ.ಮೀ ದೂರದಲ್ಲಿದೆ. ಶಿವಮೊಗ್ಗದಿಂದ ಬರುವವರಿಗೆ ಕಡಲತಡಿಗೆ ಸಿಂಹ ದ್ವಾರದಂತಿದೆ.
ಹದಿ ಹರೆಯದವರಿಗೆ ಜೋಡಿಯನ್ನು ಅರಸುವ ತವಕ, ನವ ವಿವಾಹಿತರಿಗೆ ಕರುಳಕುಡಿ ಚಿಗುರಿ ಸಂತಸ ಚಿಮ್ಮುತ್ತದೆ, ಕೃಷಿಕರಿಗೆ ಫಸಲು ತುಂಬಿ ಸಮೃದ್ಧಿಯ ಕುಡಿ ಮೊಳೆಯತ್ತದೆ ಒಟ್ಟಿನಲ್ಲಿ ಕೋಟೇಶ್ವರ ನಗರವಿಡೀ ಶೃಂಗಾರ, ಧಾರ್ಮಿಕ ಸಾಂಸ್ಕೃತಿಕ ಮತ ಪಂಥೀಯ ಜಾನೃತ್ಯ ಸಾರುವ ಕೊಡಿ ಹಬ್ಬವನ್ನು ನೋಡಿಯೇ ನಲಿಯಬೇಕು.






