ಸೊಪ್ಪು ತರಲು ಅರಣ್ಯಕ್ಕೆ ಹೋದ ರೈತರ ಮೇಲೆ ಕಾಡಾನೆ ದಾಳಿ :ಇಬ್ಬರು ಬಲಿ
Views: 55
ಕನ್ನಡ ಕರಾವಳಿ ಸುದ್ದಿ: ಸೊಪ್ಪು ತರಲು ಕಾಡಿಗೆ ಹೋದ ಇಬ್ಬರು ರೈತರು ಕಾಡಾನೆ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕೆರೆಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಡುಬಾ ಎಲ್ಲಾರ ಸಮೀಪ ಈ ದುರ್ಘಟನೆ ಸಂಭವಿಸಿದೆ.
ನಿವಾಸಿಗಳಾದ 43 ವರ್ಷದ ಉಮೇಶ್ ಮತ್ತು 42 ವರ್ಷದ ಹರೀಶ್ ಎಂಬ ಇಬ್ಬರು ರೈತರು ಮೃತಪಟ್ಟಿದ್ದಾರೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಂತೆ ಇರುವ ತಮ್ಮ ಮನೆಯ ಬಳಿಯಿಂದ ಇಂದು ಬೆಳಗ್ಗೆ ದನದ ಕೊಟ್ಟಿಗೆಗೆ ಸೊಪ್ಪು ತರಲು ಸಮೀಪದ ಅರಣ್ಯ ಪ್ರದೇಶಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.ಅರಣ್ಯ ಪ್ರದೇಶದ ಒಂದೇ ಸ್ಥಳದಲ್ಲಿ ಏಕಾಏಕಿ ಎದುರಾದ ಕಾಡಾನೆ, ಇಬ್ಬರ ಮೇಲೂ ದಾಳಿ ನಡೆಸಿದೆ. ದಾಳಿಯ ತೀವ್ರತೆಗೆ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ದುರಂತದಿಂದಾಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಕೆರೆಕಟ್ಟೆ ಪ್ರದೇಶವು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿದ್ದು, ಕಾರ್ಕಳ ವನ್ಯಜೀವಿ ವಿಭಾಗಕ್ಕೆ ಬರುತ್ತದೆ. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಶೃಂಗೇರಿ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಘಟನೆಯಿಂದಾಗಿ ಸ್ಥಳೀಯರಲ್ಲಿ ತೀವ್ರ ಆಕ್ರೋಶ ಭುಗಿಲೆದ್ದಿದ್ದು, ಸ್ಥಳೀಯರು ಮತ್ತು ರೈತ ಸಮಿತಿಯ ಜತೆಗೂಡಿ ಪ್ರತಿಭಟಿಸಿದ್ದಾರೆ.
ಆಕ್ರೋಶಿತ ಸ್ಥಳೀಯರು ಮೃತದೇಹಗಳನ್ನು ತೆಗೆಯದಂತೆ ಶೃಂಗೇರಿ-ಕೆರೆಕಟ್ಟೆ- ಬಜಗೋಳಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ, ತಹಶೀಲ್ದಾರ್, ಅರಣ್ಯ ಇಲಾಖೆಯ ಅಧಿಕಾರಿಗಳು ತೆರಳದಂತೆ ತಡೆ ಒಡ್ಡಿದ್ದಾರೆ. ಸ್ಥಳಕ್ಕೆ ಅರಣ್ಯ ಸಚಿವರು, ಸಂಸದರು ಬರುವಂತೆ ಪಟ್ಟು ಹಿಡಿದಿದ್ದಾರೆ. ಶಾಶ್ವತ ಪರಿಹಾರ ಘೋಷಿಸಿದ ಬಳಿಕ ಘಟನಾ ಸ್ಥಳಕ್ಕೆ ಹೋಗುವಂತೆ ಅಗ್ರಹಿಸಿದ್ದಾರೆ.






