ಯಾವುದೇ ಕಾರಣಕ್ಕೂ ಬ್ಲಡ್ ಮನಿ ಸ್ವೀಕರಿಸುವುದಿಲ್ಲ: ನರ್ಸ್ ನಿಮಿಷಾಗೆ ಪ್ರತಿ ನಿಮಿಷಕ್ಕೂ ಸಾವಿನ ತಲ್ಲಣ!

Views: 383
ಕನ್ನಡ ಕರಾವಳಿ ಸುದ್ದಿ: ನಿಮಿಷಾ ಪ್ರಿಯಾ ಕುರಿತ ಪ್ರಕರಣವು ಇದೀಗ ವಿಶ್ವಾದ್ಯಂತ ಸದ್ದು ಮಾಡುತ್ತಿದೆ. ಉದ್ಯೋಗ ಅರಸಿ ಯೆಮೆನ್ಗೆ ಹೋದ ಮಹಿಳೆಯೊಬ್ಬಳು ಕೊಲೆ ಪ್ರಕರಣವೊಂದರಲ್ಲಿ ಇದೀಗ ಸಾವಿನ ಕುಣಿಕೆಗೆ ಕೊರಳೊಡ್ಡುವ ಪರಿಸ್ಥಿತಿ ಬಂದಿದೆ. ಸಾವನ್ನು ಎದುರು ನೋಡುತ್ತಲೇ ಎಂಟು ವರ್ಷಗಳಿಂದ ಜೈಲಿನಲ್ಲಿ ಕಳೆದಿದ್ದಾಳೆ. ಈ ಪ್ರಕರಣ ಮುಂದೇನಾಗಬಹುದು? ನಿಮಿಷಾಗೆ ಸಾವೋ, ಬದುಕೋ?
ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ಕೊಲೆ ಪ್ರಕರಣದಲ್ಲಿ ಯೆಮೆನ್ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಆಕೆಯ ಗಲ್ಲು ಶಿಕ್ಷೆಯನ್ನು ತಡೆಯಲು ಇರುವ ಏಕೈಕ ಮಾರ್ಗವೆಂದರೆ ಅದು ಬ್ಲಡ್ ಮನಿ (ಮೃತನ ಕುಟುಂಬದವರಿಗೆ ಆರೋಪಿಯಿಂದ ಆರ್ಥಿಕ ಸಹಾಯ) ಎಂದು ಹೇಳಲಾಗಿತ್ತು. ಆದರೆ, ಬ್ಲಡ್ ಮನಿಯನ್ನು ಮೃತ ವ್ಯಕ್ತಿ ತಲಾಲ್ ಅವರ ಸೋದರ ನಿರಾಕರಿಸಿದ್ದಾರೆ. ಇದರಿಂದ ನಿಮಿಷಾ ಪ್ರಿಯಾ ಭವಿಷ್ಯ ಮತ್ತೆ ತೂಗುಗತ್ತಿಯ ಮೇಲೆ ನಿಂತಿದೆ.
ಏನಿದು ಬ್ಲಡ್ ಮನಿ?
ಮಾಡಿದ ತಪ್ಪನ್ನು ಕ್ಷಮಿಸುವುದಕ್ಕಾಗಿ ಸಂತ್ರಸ್ತರು ಅಥವಾ ಅವರ ಕುಟುಂಬದವರಿಗೆ ಪ್ರಕರಣದ ತಪ್ಪಿತಸ್ಥರು/ಆರೋಪಿಗಳು ಪರಿಹಾರದ ರೂಪದಲ್ಲಿ ನೀಡುವ ಮೊತ್ತವೇ ‘ಬ್ಲಡ್ ಮನಿ’ ಅರಬ್ಬಿ ಭಾಷೆಯಲ್ಲಿ ‘ದಿಯಾ’ ಎನ್ನಲಾಗುತ್ತದೆ. ಇಸ್ಲಾಂ ಷರಿಯಾ ಕಾನೂನು ಆನುಸರಿಸುವ ರಾಷ್ಟ್ರಗಳಲ್ಲಿ ಕ್ಷಮೆಗಾಗಿ ಪರಿಹಾರದ ಮೊತ್ತ ನೀಡುವ ಪದ್ಧತಿ ಆನುಸರಿಸಲಾಗುತ್ತದೆ. ಈ ನಿಯಮದ ಆಡಿಯಲ್ಲಿ ಅಪರಾಧ ಕೃತ್ಯ ಎಸಗಿದ ವ್ಯಕ್ತಿಯು ಪ್ರಕರಣದ ಸಂತ್ರಸ್ತ ಅಥವಾ ಅವರ ಕುಟುಂಬದವರಿಗೆ ನಿರ್ದಿಷ್ಟ ಪ್ರಮಾಣದ ಬೆಲೆಬಾಳುವ ವಸ್ತುವನ್ನು ನೀಡಬೇಕಾಗುತ್ತದೆ. ಹತ್ಯೆ ಪ್ರಕರಣಗಳಲ್ಲಿ ಪ್ರಮುಖವಾಗಿ ಈ ಪದ್ಧತಿಯನ್ನು ಬಳಸಲಾಗುತ್ತದೆ.
ನಿಮಿಷಾಳನ್ನು ಕ್ಷಮಿಸಲ್ಲ
ನಿಮಿಷಾಳ ಅಪರಾಧವನ್ನು ನಮ್ಮ ಕುಟುಂಬವು ಕ್ಷಮಿಸುವುದಿಲ್ಲ ಮತ್ತು ಯಾವುದೇ ಕಾರಣಕ್ಕೂ ಕ್ಷಮಾ ಪರಿಹಾರವನ್ನು (ಬ್ಲಡ್ ಮನಿ) ಸ್ವೀಕರಿಸುವುದಿಲ್ಲ ಎಂದು ನಿಮಿಷಾಳಿಂದ ಹತ್ಯೆಯಾದ ಯೆಮನ್ ಪ್ರಜೆ ತಲಾಲ್ ಅಬ್ದು ಮೆಹಿ ಸಹೋದರ ಅಬ್ದುಲ್ ಫತ್ತಾಹ್ ಹೇಳಿದ್ದಾರೆ. ಬಿಬಿಸಿ ಆರೇಬಿಕ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಫತ್ತಾಹ್, ತಡ ಮಾಡದೇ ನಿಮಿಷಾ ಳನ್ನು ಗಲ್ಲಿಗೇರಿ ಸಬೇಕು ಎಂದು ಒತ್ತಾಯಿಸಿದ್ದಾರೆ. ಭಾರತದ ಮಾಧ್ಯಮಗಳು ಅಪರಾಧಿಯನ್ನು ಸಂತ್ರಸ್ತೆ ಎನ್ನುವ ರೀತಿ ಬಿಂಬಿಸುತ್ತಿವೆ. ನಿಮಿಷಾಳಿಗೆ ಮೆಟ್ಟಿ ಕಿರುಕುಳ ನೀಡಿದ್ದನು ಮತ್ತು ಆಕೆಯ ಪಾಸ್‌ಪೋರ್ಟ್ ಇಟ್ಟುಕೊಂಡಿದ್ದನು ಎಂಬ ಸುಳ್ಳನ್ನು ಹರಡುತ್ತಿವೆ. ಈ ಸುಳ್ಳುಗಳಿಂದ ನಮ್ಮ ಕುಟುಂಬಕ್ಕೆ ಇನ್ನಷ್ಟು ನೋವಾಗಿದೆ ಎಂದು ಹೇಳಿದ್ದಾರೆ.