ಸಾಂಸ್ಕೃತಿಕ

ವಿಶ್ವ ಪರಿಸರ ದಿನ ʼಕಾಂತಾರ: ಚಾಪ್ಟರ್‌ 1ʼ ಹೊಸ ಪೋಸ್ಟರ್‌ ರಿಲೀಸ್‌ ಮಾಡಿ ಇನ್ನಷ್ಟು ಕುತೂಹಲ ಬಿಚ್ಚಿಟ್ಟ ರಿಷಬ್‌ !

Views: 94

ಕನ್ನಡ ಕರಾವಳಿ ಸುದ್ದಿ: 2022ರಲ್ಲಿ ತೆರೆಕಂಡ ʼಕಾಂತಾರʼ ಈ ಚಿತ್ರದಲ್ಲಿ ರಿಷಬ್‌ ಶೆಟ್ಟಿ ನಾಯಕನಾಗಿ ಕಾಣಿಸಿಕೊಳ್ಳುವ ಜತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದರು. ಮಾತ್ರವಲ್ಲ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾ 16 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿ ಬಾಕ್ಸ್‌ ಆಫೀಸ್‌ನಲ್ಲಿ 400 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿ ಗಮನ ಸೆಳೆದಿತ್ತು. ಪ್ಯಾನ್‌ ಇಂಡಿಯಾ ಮಟ್ಟದಲ್ಲಿಯೂ ಸದ್ದು ಮಾಡಿದ ಈ ಚಿತ್ರದ ಪ್ರೀಕ್ವೆಲ್‌ ಇದೀಗ ತಯಾರಾಗುತ್ತಿದೆ. ರಿಷಬ್‌ ಶೆಟ್ಟಿ ಈ ಚಿತ್ರಕ್ಕೂ ಆ್ಯಕ್ಷನ್‌ ಕಟ್‌ ಹೇಳುವ ಜತೆಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ‘ಕಾಂತಾರ’ ಕಥೆ ನಡೆಯುವುದಕ್ಕೆ ಮೊದಲು ಏನಾಗಿತ್ತು ಎನ್ನುವುದನ್ನು ʼಕಾಂತಾರ: ಚಾಪ್ಟರ್‌ 1ʼ ಚಿತ್ರದಲ್ಲಿ ರಿಷಬ್‌ ಬಿಚ್ಚಿಡಲಿದ್ದಾರೆ. ವಿಶ್ವ ಪರಿಸರ ದಿನದ ಪ್ರಯುಕ್ತ ಚಿತ್ರತಂಡ ಜೂ. 5ರಂದು ಹೊಸದೊಂದು ಪೋಸ್ಟರ್‌ ರಿಲೀಸ್‌ ಮಾಡಿ ಪ್ರೇಕ್ಷಕರಲ್ಲಿ ಮೂಡಿದ್ದ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.

ಹೊಂಬಾಳೆ ಫಿಲ್ಮ್ಸ್‌ ʼಕಾಂತಾರ: ಚಾಪ್ಟರ್‌ 1ʼ ಸಿನಿಮಾವನ್ನು ಅದ್ಧೂರಿಯಾಗಿಯೇ ನಿರ್ಮಿಸುತ್ತಿದೆ. ಮೂಲಗಳ ಪ್ರಕಾರ 120 ಕೋಟಿ ರೂ. ವೆಚ್ಚದಲ್ಲಿ ತಯಾರಾಗುತ್ತಿದೆ. ಇದೇ ಕಾರಣಕ್ಕೆ ಭಾರಿ ಕುತೂಹಲ ಮೂಡಿಸಿದ ಈ ಚಿತ್ರದ ಶೂಟಿಂಗ್‌ ಬಹುತೇಕ ಪೂರ್ಣಗೊಂಡಿದೆ. ಚಿತ್ರಕ್ಕಾಗಿ ಭರ್ಜರಿ ತಯಾರಿಸಿ ನಡೆಸಿದ್ದ ರಿಷಬ್‌ ಪ್ರಾಚೀನ ಯುದ್ಧಕಲೆ ಕಳರಿಪಯಟ್ಟು, ಕುದುರೆ ಸವಾರಿ ಕಲಿತಿದ್ದಾರೆ. ಆ ಮೂಲಕ ದೊಡ್ಡದಾಗಿ ಏನನ್ನೋ ಪ್ರೇಕ್ಷಕರ ಮುಂದಿಡುವ ಸೂಚನೆ ನೀಡಿದ್ದಾರೆ. ಅದಕ್ಕೆ ಸಾಕ್ಷಿಯಂತಿದೆ ಈ ಹೊಸ ಪೋಸ್ಟರ್‌

ದಟ್ಟ ಕಾಡಿನಲ್ಲಿ ಮಂಜು ಆವರಿಸಿರುವ ಫೋಟೊವನ್ನು ಶೇರ್‌ ಮಾಡಿ ಚಿತ್ರತಂಡ ವಿಶ್ವ ಪರಿಸರ ದಿನ ಎಂದು ಬರೆದುಕೊಂಡಿದೆ. ಜತೆಗೆ ಈ ವರ್ಷದ ಅ. 2ರಂದು ಬಿಡುಗಡೆಯಾಗುತ್ತಿರುವುದಾಗಿ ಮತ್ತೊಮ್ಮೆ ಸ್ಪಷ್ಟಪಡಿಸಿದೆ. “ನಮ್ಮನ್ನು ರಕ್ಷಿಸುವ ಕಾಡುಗಳನ್ನು ಕಾಪಾಡೋಣ. ಅವು ನಮ್ಮ ಚೈತನ್ಯ, ನಮ್ಮ ಶಕ್ತಿ, ನಮ್ಮ ಕಥೆ. ಅವುಗಳನ್ನು ನಮಗಾಗಿ ಮತ್ತು ಮುಂದಿನ ಪೀಳಿಗೆಗಾಗಿ ಸಂರಕ್ಷಿಸಲು ಪ್ರತಿಜ್ಞೆ ಮಾಡೋಣʼʼ ಎಂದು ಬರೆದುಕೊಂಡಿದೆ. ಆ ಮೂಲಕ ಚಿತ್ರದ ಮುಖ್ಯ ಭಾಗ ಕಾಡಿನಲ್ಲೇ ನಡೆಯಲಿದೆ ಎನ್ನುವ ಸೂಚನೆಯನ್ನು ನೀಡಿದೆ.

ಹಾಗೆ ನೋಡಿದರೆ ʼಕಾಂತಾರʼದ ಕಥೆಯೂ ಬಹುತೇಕ ಕಾಡಿನ ಆಸುಪಾಸಿನಲ್ಲೇ ನಡೆದಿತ್ತು. ಕಾಡಿನಂಚಿನವರ ನೋವು-ನಲಿವು, ಏಳು-ಬೀಳುಗಳನ್ನು ತೆರೆಮೇಲೆ ತಂದಿತ್ತು. ಜತೆಗೆ ತುಳುನಾಡ ವಿಶಿಷ್ಟ ಭೂತಾರಾಧನೆಯನ್ನು ಇಡೀ ಲೋಕಕ್ಕೆ ಪರಿಚಯಿಸಿತ್ತು. ಹೀಗಾಗಿ ಈ ಭಾಗದಲ್ಲಿ ಮತ್ತೊಂದು ಹೊಸ ಲೋಕ, ಹೊಸ ಕಥೆ ಅನಾವರಣಗೊಳ್ಳಲಿದೆ ಎಂದೇ ಸಿನಿಪ್ರೇಮಿಗಳು ಊಹಿಸಿದ್ದಾರೆ. ಅದಕ್ಕೆ ತಕ್ಕಂತೆ ರಿಷಬ್‌ ಕುಂದಾಪುರ, ಹಾಸನದ ದಟ್ಟ ಕಾಡುಗಳಲ್ಲಿ, ಬೃಹತ್‌ ಸೆಟ್‌ ಹಾಕಿ ಚಿತ್ರೀಕರಣ ನಡೆಸಿದ್ದಾರೆ. ಇದು ತುಳುನಾಡಿನ ಪಂಜುರ್ಲಿ ದೈವದ ಕಥೆಯನ್ನು ಒಳಗೊಂಡಿದೆ ಎನ್ನಲಾಗಿದೆ.

ಕದಂಬರ ಕಾಲಘಟ್ಟದಲ್ಲಿ ʼಕಾಂತಾರ: ಚಾಪ್ಟರ್‌ 1ʼರ ಕಥೆ ನಡೆಯಲಿದೆ. ಕದಂಬರು ಕರ್ನಾಟಕವನ್ನು ಆಳಿದ ಪ್ರಸಿದ್ಧ ರಾಜ ಮನೆತನವಾಗಿದ್ದು, ಇವರ ಆಳ್ವಿಕೆಯನ್ನು ಭಾರತದ ಇತಿಹಾಸದಲ್ಲಿ ಸುವರ್ಣ ಯುಗ ಎಂದೇ ಕರೆಯಲಾಗುತ್ತದೆ. ಹೀಗಾಗಿ ಚಿತ್ರವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಇದು ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್‌ ಸೇರಿ 7 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. 2023ರಲ್ಲಿ ಆಂಭವಾದ ಚಿತ್ರ ಸುಮಾರು 2 ವರ್ಷಗಳ ಬಳಿಕ ರಿಲೀಸ್‌ ಆಗಲಿದೆ.

Related Articles

Back to top button
error: Content is protected !!