ಮಾಜಿ ಸಚಿವರಿಗೆ ಬ್ಲ್ಯಾಕ್‌ಮೇಲ್: 20 ಲಕ್ಷ ರೂ.ಬೇಡಿಕೆ ಇಟ್ಟ ಕಲಬುರಗಿಯ ನಲಪಾಡ್ ಬ್ರಿಗೇಡ್‌ನ ಅಧ್ಯಕ್ಷೆ ಸೆರೆ

Views: 121
ಕನ್ನಡ ಕರಾವಳಿ ಸುದ್ದಿ : ಮಾಜಿ ಸಚಿವರೊಬ್ಬರಿಗೆ ಪಕ್ಷವೊಂದರ ನಾಯಕಿಯೇ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪಕ್ಷದ ನಾಯಕಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಾಜಿ ಸಚಿವರೊಬ್ಬರಿಗೆ ಕಾಂಗ್ರೆಸ್ ನಾಯಕಿ ಕಲಬುರಗಿಯ ನಲಪಾಡ್ ಬ್ರಿಗೇಡ್‌ನ ಅಧ್ಯಕ್ಷೆ ಅಶ್ಲೀಲ ಚಾಟ್ ಮಾಡುವ ಮೂಲಕ ಹನಿಟ್ರ್ಯಾಪ್ ಖೆಡ್ಡಾಗೆ ಬೀಳಿಸಿದ್ದರು ಎನ್ನಲಾಗಿದೆ.
ಮೊದಲಿಗೆ ಮಾಜಿ ಸಚಿವರೊಬ್ಬರಿಗೆ ವಾಟ್ಸಪ್‌ನಲ್ಲಿ ಅಶ್ಲೀಲವಾಗಿ ಸಂದೇಶಗಳನ್ನು ಕಳಿಸಿದ್ದಾರೆ. ನಂತರ ಖಾಸಗಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಆ ರಾಜಕಾರಣಿಗೆ ಬರೋಬ್ಬರಿ 20 ಲಕ್ಷ ರೂಪಾಯಿ ಹಣ ನೀಡುವಂತೆ ಬ್ಲ್ಯಾಕ್‌ಮೇಲ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಈ ಸಂಬಂಧ ಸಿಸಿಬಿ ಪೊಲೀಸರಿಗೆ ಮಾಜಿ ಸಚಿವರ ಪುತ್ರ ದೂರು ನೀಡಿದ್ದರು. ಹನಿಟ್ರ್ಯಾಪ್ ಮತ್ತು ಹಣ ಸುಲಿಗೆ ಆರೋಪದ ಮೇರೆಗೆ ದೂರು ದಾಖಲಿಸಿಕೊಂಡಿದ್ದ ಸಿಸಿಬಿ ಪೊಲೀಸರು ಮಂಜುಳಾ ಎಂಬುವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಇನ್ನು ಬಂಧಿತ ಆರೋಪಿಯಾಗಿರುವ ಮಂಜುಳಾ ಪಾಟೀಲ್ ಅವರು ಕಲಬುರಗಿಯ ನಲಪಾಡ್ ಬ್ರಿಗೇಡ್‌ನ ಅಧ್ಯಕ್ಷೆ ಎಂದು ತಿಳಿದುಬಂದಿದೆ. ಮಂಜುಳಾ ಅವರ ಜೊತೆಗೆ ಪತಿ ಶಿವರಾಜ್ ಪಾಟೀಲ್ ಅವರನ್ನು ಸಿಸಿಬಿ ಬಂಧಿಸಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಕಾಂಗ್ರೆಸ್ ಮುಖಂಡರು ಹಾಗೂ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಅವರಿಗೆ ಈ ಆರೋಪಿ ಮಂಜುಳಾ ಅವರು ಬರೋಬ್ಬರಿ 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಇದರಲ್ಲಿ ಇವರಿಗೆ ಪತಿ ಕೂಡ ಸಾಥ್ ನೀಡಿರುವ ಆರೋಪವಿದ್ದು ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ಇನ್ನು ಮಾಜಿ ಸಚಿವರ ಪುತ್ರ ಸಿಸಿಬಿ ಪೊಲೀಸರಿಗೆ ಈ ಸುಲಿಗೆ ಸಂಬಂಧ ಮಂಜುಳಾ ಮೇಲೆ ದೂರು ನೀಡಿದ್ದರು. ಹಾಗಾಗಿ ಸಿಸಿಬಿ ಪೊಲೀಸರು ಮಂಜುಳಾ ಹಾಗೂ ಅವರ ಪತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.






