ಬಾಡಿಗೆಗೆ ಮನೆ ನೀಡುವಾಗ ಎಚ್ಚರ…!

Views: 126
ಬೆಂಗಳೂರು: ನಗರದಲ್ಲಿ ವಿದೇಶಿ ಪ್ರಜೆಗಳಿಗೆ ಬಾಡಿಗೆಗೆ ಮನೆ ನೀಡುವಾಗ ಮನೆ ಮಾಲೀಕರು ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ‘ಸಿ’ ಫಾರ್ಮ್ ಭರ್ತಿ ಮಾಡಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದ್ದಾರೆ.
ಕಸ್ತೂರಿನಗರದ ನ್ಯೂ ಹಾರಿಜನ್ ಕಾಲೇಜಿನಲ್ಲಿ ನಡೆದ ಮಾಸಿಕ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದರು.
ವಿದೇಶಿ ಪ್ರಜೆಗಳು ನಗರದಲ್ಲಿ ಮಾದಕವಸ್ತು ಮಾರಾಟ, ಸಾಗಣೆ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಬಗ್ಗೆ ದೂರುಗಳು ಬರುತ್ತಿವೆ. ಹೀಗಾಗಿ ಮನೆ ಮಾಲೀಕರು ವಿದೇಶಿ ಪ್ರಜೆಗಳಿಗೆ ಮನೆ ಬಾಡಿಗೆಗೆ ನೀಡುವಾಗ ಅವರ ಮಾಹಿತಿ ಸಂಗ್ರಹಿಸಿ ಸ್ಥಳೀಯ ಪೊಲೀಸರಿಗೆ ನೀಡಬೇಕು. ಇದರಿಂದ ಅವರ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಹಾಯವಾಗುತ್ತದೆ ಎಂದರು.
ಈಗಾಗಲೇ ಹೋಟೆಲ್, ಪಿಜಿ ಮಾಲೀಕರಿಗೆ ಈ ವಿದೇಶಿ ಪ್ರಜೆಗಳಿಗೆ ಮನೆ, ರೂಮ್ ಬಾಡಿಗೆಗೆ ನೀಡುವಾಗ ಸಿ ಫಾರ್ಮ್ ಭರ್ತಿ ಮಾಡಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಿದ್ದೇವೆ. ಆದರೆ, ಬಹುತೇಕರು ಇದನ್ನು ಪಾಲಿಸುತ್ತಿಲ್ಲ. ಅಂತಹ ಹೋಟೆಲ್ ಮಾಲೀಕರು, ಪಿಜಿ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಮನೆ ಮಾಲೀಕರು ಈ ವಿದೇಶಿ ಪ್ರಜೆಗಳ ಬಗ್ಗೆ ಮಾಹಿತಿ ನೀಡದಿದ್ದರೆ ಕಾನೂನು ಉಲ್ಲಂಘನೆಯಾಗುತ್ತದೆ. ‘ಸಿ’ ಫಾರ್ಮ್ ಭರ್ತಿ ನಿಯಮ ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.






